ನ್ಯೂಝಿಲೆಂಡ್, ದಕ್ಷಿಣ ಆಫ್ರಿಕ, ಅಫ್ಘಾನಿಸ್ತಾನ ಸೂಪರ್ ಲೀಗ್‌ಗೆ ಪ್ರವೇಶ

Update: 2018-01-17 18:14 GMT

ಟೌರಂಗಾ, ಜ.17: ಮೊದಲ ವಿಕೆಟ್‌ಗೆ ದ್ವಿಶತಕದ ಜೊತೆಯಾಟ ನಡೆಸಿದ ನ್ಯೂಝಿಲೆಂಡ್ ಆರಂಭಿಕ ಆಟಗಾರರಾದ ಜಾಕಬ್ ಭುಲಾ ಹಾಗೂ ರಚಿನ್ ರವೀಂದ್ರ ಐಸಿಸಿ ಅಂಡರ್-19 ಕ್ರಿಕೆಟ್ ವಿಶ್ವಕಪ್‌ನಲ್ಲಿ ಹಲವು ದಾಖಲೆಗಳನ್ನು ಮುರಿದಿದ್ದಾರೆ.

ಭುಲಾ(180 ರನ್,144 ಎಸೆತ, 10 ಬೌಂಡರಿ, 5 ಸಿಕ್ಸರ್) ಹಾಗೂ ರವೀಂದ್ರ(117, 101 ಎಸೆತ, 8 ಬೌಂಡರಿ, 3 ಸಿಕ್ಸರ್)ಕೀನ್ಯ ವಿರುದ್ಧದ ‘ಎ’ ಗುಂಪಿನ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ 243 ರನ್‌ಗಳಿಂದ ಜಯ ಸಾಧಿಸಲು ನೆರವಾಗಿದ್ದಾರೆ. ಚೊಚ್ಚಲ ದ್ವಿಶತಕದಿಂದ ವಂಚಿತರಾದ ಭುಲಾ ಅಂಡರ್-19 ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದ್ದಾರೆ.

ಭುಲಾ ಹಾಗೂ ರವೀಂದ್ರ ಅವರ ಮೊದಲ ವಿಕೆಟ್‌ಗೆ 245 ರನ್ ಜೊತೆಯಾಟ ನಡೆಸಿ ನ್ಯೂಝಿಲೆಂಡ್ ಅಂಡರ್-19 ಕ್ರಿಕೆಟ್ ವಿಶ್ವಕಪ್‌ನಲ್ಲಿ ಎರಡನೇ ಗರಿಷ್ಠ ಮೊತ್ತ(436/4)ದಾಖಲಿಸಲು ನೆರವಾಗಿದ್ದಾರೆ. 2002ರಲ್ಲಿ ಕೀನ್ಯ ವಿರುದ್ಧವೇ ಆಸ್ಟ್ರೇಲಿಯ ತಂಡ 6 ವಿಕೆಟ್‌ಗಳ ನಷ್ಟಕ್ಕೆ 480 ರನ್ ಗಳಿಸಿರುವುದು ಗರಿಷ್ಠ ಮೊತ್ತವಾಗಿದೆ.

 ಕೀನ್ಯ 50 ಓವರ್ ಪಂದ್ಯವನ್ನು ಆಡಿದ್ದರೂ 4 ವಿಕೆಟ್‌ಗಳ ನಷ್ಟಕ್ಕೆ 193 ರನ್ ಗಳಿಸಿತು. ಅಮಾನ್ ಗಾಂಧಿ(63ರನ್) ಹಾಗೂ ಥಾಮಸ್(ಅಜೇಯ 39) ಒಂದಷ್ಟು ಹೋರಾಟ ನೀಡಿದರು.

 ಮತ್ತೊಂದು ‘ಎ’ ಗುಂಪಿನ ಪಂದ್ಯದಲ್ಲಿ ವಾಂಡಿಲ್ ಮಕ್‌ವೆಟು(ಅಜೇಯ 99)ಅರ್ಧಶತಕ ಹಾಗೂ ವೇಗದ ಬೌಲರ್ ಹೆರ್ಮಾನ್ ರಾಲ್ಫೆಸ್ ಉತ್ತಮ ಬೌಲಿಂಗ್ ಬೆಂಬಲದಿಂದ ದಕ್ಷಿಣ ಆಫ್ರಿಕ ತಂಡ ಹಾಲಿ ಚಾಂಪಿಯನ್ ವೆಸ್ಟ್‌ಇಂಡೀಸ್‌ನ್ನು 76 ರನ್‌ಗಳಿಂದ ಮಣಿಸಿತು.

ಸತತ ಎರಡು ಪಂದ್ಯಗಳನ್ನು ಜಯಿಸಿರುವ ನ್ಯೂಝಿಲೆಂಡ್ ಹಾಗೂ ದಕ್ಷಿಣ ಆಫ್ರಿಕ ತಂಡಗಳು ಸೂಪರ್ ಲೀಗ್‌ಗೆ ತೇರ್ಗಡೆಯಾಗಿವೆ.

ಇದೇ ವೇಳೆ, ಶ್ರೀಲಂಕಾ ತಂಡವನ್ನು 32 ರನ್‌ಗಳಿಂದ ಮಣಿಸಿದ ಅಫ್ಘಾನಿಸ್ತಾನ ತಂಡ ‘ಡಿ’ ಗುಂಪಿನಲ್ಲಿ ಸೂಪರ್ ಲೀಗ್‌ಗೆ ತೇರ್ಗಡೆಯಾದ ಮೊದಲ ತಂಡ ಎನಿಸಿಕೊಂಡಿತು.

ದಿನದ ನಾಲ್ಕನೇ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡ ಝಿಂಬಾಬ್ವೆಯನ್ನು 7 ವಿಕೆಟ್‌ಗಳಿಂದ ಮಣಿಸಿತು. ಇದರೊಂದಿಗೆ ‘ಬಿ’ ಗುಂಪಿನಲ್ಲಿ ಮೊದಲ ಜಯ ಸಾಧಿಸಿತು

 ಶುಕ್ರವಾರ ಆಸ್ಟ್ರೇಲಿಯ ತಂಡ ಪಪುವಾ ನ್ಯೂಗಿನಿ ತಂಡವನ್ನು, ಭಾರತ ತಂಡ ಝಿಂಬಾಬ್ವೆ ತಂಡವನ್ನು ಎದುರಿಸಲಿದೆ. ಆಸ್ಟ್ರೇಲಿಯ ಹಾಗೂ ಭಾರತ ಈ ಪಂದ್ಯವನ್ನು ಜಯಿಸಿದರೆ ಸೂಪರ್ ಲೀಗ್‌ಗೆ ಅರ್ಹತೆ ಪಡೆಯುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News