ದ್ರಾವಿಡ ಅಸ್ಮಿತೆಯ ಆಧಾರದಲ್ಲಿ ದಕ್ಷಿಣದ ರಾಜ್ಯಗಳು ಒಂದಾಗಬೇಕು : ಕಮಲ್ ಹಾಸನ್

Update: 2018-01-18 12:17 GMT

ಚೆನ್ನೈ,ಜ.18 : ದ್ರಾವಿಡ ಅಸ್ಮಿತೆಯ ಆಧಾರದಲ್ಲಿ ದಕ್ಷಿಣ ಭಾರತ ಒಗ್ಗಟ್ಟಿನಿಂದ ಒಂದೇ ದನಿಯಿಂದ ಹೋರಾಡಿದರೆ ಮಾತ್ರ ಅವುಗಳು ಹೇಳಿದ ಹಾಗೆ ಕೇಂದ್ರ ಸರಕಾರ ಕೇಳುವಂತೆ ಮಾಡಬಹುದಾಗಿದೆ, ಎಂದು ಹಿರಿಯ ನಟ ಕಮಲ್ ಹಾಸನ್ ಅಭಿಪ್ರಾಯ ಪಟ್ಟಿದ್ದಾರೆ. ಈಗಾಗಲೇ ತಾವು ರಾಜಕೀಯ ಪ್ರವೇಶಿಸುವುದಾಗಿ ಘೋಷಿಸಿ ಸಾಕಷ್ಟು ಕುತೂಹಲ ಮೂಡಿಸಿರುವ ನಟ ತಾವು ತಮ್ಮ ರಾಜ್ಯವ್ಯಾಪಿ ಪ್ರವಾಸವನ್ನು ಫೆಬ್ರವರಿ 21ರಂದು  ರಾಮನಾಥಪುರಂ ಜಿಲ್ಲೆಯಲ್ಲಿರುವ ಮಾಜಿ ರಾಷ್ಟ್ರಪತಿ ಎ ಪಿ ಜೆ ಅಬ್ದುಲ್ ಕಲಾಂ ಅವರ ನಿವಾಸದಿಂದ ಆರಂಭಿಸುವುದಾಗಿಯೂ ಅವರು ಬಹಿರಂಗ ಪಡಿಸಿದ್ದಾರೆ.

ತಮಿಳು ನಿಯತಕಾಲಿಕವೊಂದರಲ್ಲಿನ ತಮ್ಮ ಅಂಕಣದಲ್ಲಿ ಮೇಲಿನಂತೆ ಬರೆದಿರುವ ಕಮಲ್ ಹಾಸನ್ "ಕೇಂದ್ರ ಇಲ್ಲಿಂದ (ತಮಿಳುನಾಡು) ತೆರಿಗೆ ಸಂಗ್ರಹಿಸಿ ಅದನ್ನು ಉತ್ತರ ಭಾರತ ರಾಜ್ಯಗಳ ಅಭಿವೃದ್ಧಿಗೆ ಉಪಯೋಗಿಸುತ್ತಿದ್ದಾರೆ ಎಂದು ಕೆಲವರು ಹೇಳುತ್ತಾರೆ. ನನ್ನ ಅಭಿಪ್ರಾಯದಲ್ಲಿ ಅವಿಭಕ್ತ ಕುಟುಂಬದಲ್ಲಿ ಹೀಗೆಯೇ ನಡೆಯುತ್ತದೆ, ಅವಿಭಕ್ತ ಕುಟುಂಬಗಳಲ್ಲಿ ಹಿರಿಯಣ್ಣ ಹಾಗೂ ಕುಟುಂಬದ ಆಧಾರ ಸ್ಥಂಭ ತನ್ನ ನಿರುದ್ಯೋಗಿ  ಸೋದರರನ್ನು ಸಲಹುತ್ತಾನೆ. ಆದರೆ  ಕಿರಿಯ ಸೋದರರು ತಮ್ಮ ಹಿರಿಯಣ್ಣರನ್ನು ಮೂರ್ಖರೆಂದು ಪರಿಗಣಿಸಿ ಅವರನ್ನು ಹಸಿವಿನಿಂದ ನರಳಲು ಬಿಡಬಾರದು,'' ಎಂದು ಬರೆದಿರುವ ಕಮಲ್ ಆಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕ ಹಾಗೂ ಕೇರಳದ ಮುಖ್ಯಮಂತ್ರಿಗಳು ತಮ್ಮ ದ್ರಾವಿಡ ಅಸ್ಮಿತೆಯನ್ನು ಆಲಂಗಿಸಿ ಜತೆಯಾಗಬೇಕು ಎಂದು ಬರೆದಿದ್ದಾರೆ. "ಹೀಗೆ ಮಾಡಿದಾಗ ಮಾತ್ರ ನಾವು ತಾರತಮ್ಯವಾಗುತ್ತಿದೆ ಎಂಬ ದೂರನ್ನು ಹೋಗಲಾಡಿಸಬುದು. ನಮ್ಮ ದನಿ ದೊಡ್ಡದಾಗಿ ದಿಲ್ಲಿಗೆ ಕೇಳಿಸುತ್ತದೆ'' ಎಂದು ಕಮಲ್ ಹೇಳಿದ್ದಾರೆ.

ಕಲಾಂ ಅವರ ನಿವಾಸದಿಂದ ರಾಜ್ಯ ಪ್ರವಾಸವನ್ನು ಏಕೆ ಪ್ರಾರಂಭಿಸುತ್ತಿದ್ದೇನೆಂಬುದನ್ನೂ ವಿವರಿಸಿರುವ ಕಮಲ್ "ಕಲಾಂ ಅವರಿಗೆ ಹಲವು ಕನಸುಗಳಿದ್ದವು, ನನಗೂ ಇವೆ. ಅವರು ಸಮೃದ್ಧ ತಮಿಳುನಾಡಿನ ಕನಸು ಕಂಡಿದ್ದರು ನಾನೂ ಅದೇ ಕನಸು ಕಾಣುತ್ತಿದ್ದೇನೆ,'' ಎಂದು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News