ಏಷ್ಯನ್ ಟೀಮ್ ಚಾಂಪಿಯನ್‌ಶಿಪ್: ಭಾರತಕ್ಕೆ ಸಿಂಧು, ಶ್ರೀಕಾಂತ್ ಸಾರಥ್ಯ

Update: 2018-01-18 18:16 GMT

ಹೊಸದಿಲ್ಲಿ, ಜ.18: ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧು ಹಾಗೂ ವಿಶ್ವದ ನಂ.3ನೇ ಆಟಗಾರ ಕಿಡಂಬಿ ಶ್ರೀಕಾಂತ್ ಏಷ್ಯನ್ ಟೀಮ್ ಚಾಂಪಿಯನ್‌ಶಿಪ್‌ನಲ್ಲಿ ಕ್ರಮವಾಗಿ ಭಾರತದ ಮಹಿಳೆಯರ ಹಾಗೂ ಪುರುಷರ ತಂಡದ ಸಾರಥ್ಯವಹಿಸಿಕೊಳ್ಳಲಿದ್ದಾರೆ.

ಏಷ್ಯನ್ ಟೀಮ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಮಲೇಷ್ಯಾದಲ್ಲಿ ಫೆ.6 ರಿಂದ 11ರ ತನಕ ನಡೆಯಲಿದೆ.

ಹೈದರಾಬಾದ್‌ನಲ್ಲಿ ನಡೆದ 2016ರ ಆವೃತ್ತಿಯ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಪುರುಷರ ತಂಡ ಇಂಡೋನೇಷ್ಯಾ ವಿರುದ್ದ ಸೆಮಿಫೈನಲ್‌ನಲ್ಲಿ ಸೋತಿತ್ತು. ಮಹಿಳಾ ತಂಡ ಕ್ವಾರ್ಟರ್ ಫೈನಲ್‌ನಲ್ಲಿ ದಕ್ಷಿಣ ಕೊರಿಯಾಕ್ಕೆ ಶರಣಾಗಿತ್ತು.

ಥಾಮಸ್ ಹಾಗೂ ಉಬೆರ್ ಕಪ್ ಫೈನಲ್ಸ್‌ಗೆ ಏಷ್ಯನ್ ಟೀಮ್ ಚಾಂಪಿಯನ್‌ಶಿಪ್ ಅರ್ಹತಾ ಟೂರ್ನಿಯಾಗಿರುವ ಕಾರಣ ಭಾರತದ ಬ್ಯಾಡ್ಮಿಂಟನ್ ಸಂಸ್ಥೆ(ಬಿಎಐ) ಬಲಿಷ್ಠ ತಂಡ ಕಣಕ್ಕಿಳಿಸಲು ನಿರ್ಧರಿಸಿದೆ. ಪುರುಷರ ಸಿಂಗಲ್ಸ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಲಿರುವ ಶ್ರೀಕಾಂತ್ ಕಳೆದ ವರ್ಷ ನಾಲ್ಕು ಸೂಪರ್ ಸರಣಿ ಪ್ರಶಸ್ತಿಗಳನ್ನು ಜಯಿಸಿದ್ದರು. ಶ್ರೀಕಾಂತ್ ಅವರೊಂದಿಗೆ ಎಚ್.ಎಸ್.ಪ್ರಣಯ್, ಸಾಯಿ ಪ್ರಣೀತ್ ಹಾಗೂ ಸಮೀರ್ ವರ್ಮ ಅವರಿದ್ದಾರೆ.

ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಸಿಂಧು ಲಂಡನ್ ಗೇಮ್ಸ್ ನಲ್ಲಿ ಕಂಚು ಜಯಿಸಿರುವ ಸೈನಾ ನೆಹ್ವಾಲ್, ಕೃಷ್ಣಾ ಪ್ರಿಯಾ ಹಾಗೂ ಋತ್ವಿಕ್ ಗಾಡೆ ಅವರೊಂದಿಗೆ ಸ್ಪರ್ಧಿಸಲಿದ್ದಾರೆ.

ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯಿರಾಜ್ ಹಾಗೂ ಚಿರಾಗ್ ಶೆಟ್ಟಿ, ವಿಶ್ವದ ನಂ.32ನೇ ಆಟಗಾರ ಮನು ಅತ್ರಿ ಹಾಗೂ ಸುಮೀತ್ ರೆಡ್ಡಿ ಹಾಗೂ ಶ್ಲೋಕ್ ರಾಮಚಂದ್ರನ್ ಹಾಗೂ ಎಂಆರ್ ರಾಜನ್ ಅವರಿದ್ದಾರೆ.

 ಮಹಿಳೆಯರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಹಾಗೂ ಸಿಕ್ಕಿ ರೆಡ್ಡಿ, ಪ್ರಜಕ್ತಾ ಸಾವಂತ್ ಹಾಗೂ ಸನ್ಯೋಗಿತಾ, ಋತುಪರ್ಣ ದಾಸ್ ಹಾಗೂ ಮಿಥಿಲಾ ಅವರಿದ್ದಾರೆ.

 ಪುರುಷರ ಪಂದ್ಯಾವಳಿಯಲ್ಲಿ ಚೀನಾ, ಹಾಂಕಾಂಗ್, ಜಪಾನ್, ಕಝಕ್‌ಸ್ತಾನ, ದಕ್ಷಿಣ ಕೊರಿಯಾ, ಮಲೇಷ್ಯಾ, ಮಾಲ್ಡೀವ್ಸ್, ಮೈನ್ಮಾರ್, ನೇಪಾಳ, ಫಿಲಿಪ್ಪೈನ್ಸ್, ಸಿಂಗಾಪುರ, ಥಾಯ್ಲೆಂಡ್ ಹಾಗೂ ಚೈನೀಸ್ ತೈಪೆ ತಂಡಗಳು ಸ್ಪರ್ಧಿಸಲಿವೆ.

 ಪುರುಷರ ಹಾಗೂ ಮಹಿಳಾ ವಿಭಾಗದ ಅಗ್ರ ನಾಲ್ಕು ಸೆಮಿ ಫೈನಲ್ ತಂಡಗಳು ಥಾಮಸ್ ಕಪ್ ಹಾಗೂ ಉಬೆರ್ ಕಪ್ ಫೈನಲ್ಸ್‌ಗೆ ಅರ್ಹತೆ ಪಡೆಯುತ್ತವೆ. ಈ ಎರಡು ಟೂರ್ನಿಯು ಬ್ಯಾಂಕಾಕ್‌ನಲ್ಲಿ ಮೇ 20 ರಿಂದ 27ರ ತನಕ ನಡೆಯುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News