ಸಕಾರಾತ್ಮಕ ಪಾಲನೆ ಇಂದಿನ ಅಗತ್ಯ: ಶಿಕ್ಷಣ ತಜ್ಞರ ಅಭಿಮತ

Update: 2018-01-19 13:14 GMT

ಲಕ್ನೊ, ಜ.19: ಲಕ್ನೊದ ಶಾಲೆಯೊಂದರಲ್ಲಿ ಹಿರಿಯ ವಿದ್ಯಾರ್ಥಿನಿಯೊಬ್ಬಳು 1ನೆ ತರಗತಿಯ ವಿದ್ಯಾರ್ಥಿಗೆ ಚಾಕುವಿನಿಂದ ಇರಿದ ಪ್ರಕರಣದ ರೀತಿಯ ಘಟನೆಗಳು ಪ್ರಸಕ್ತ ಸಂದರ್ಭದಲ್ಲಿ ಆಗಿಂದಾಗ್ಗೆ ಮರುಕಳಿಸುತ್ತಿರುವ ಕುರಿತು ಶಿಕ್ಷಣ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

 ಇಂತಹ ಘಟನೆಗಳಿಗೆ ನೈತಿಕ ಮೌಲ್ಯಗಳು ತೀವ್ರವಾಗಿ ಕುಸಿಯುತ್ತಿರುವುದು ಪ್ರಮುಖ ಕಾರಣವಾಗಿದ್ದು ಸಕಾರಾತ್ಮಕ ಪಾಲನೆ ಇಂದಿನ ಅಗತ್ಯ ಎಂದು ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

 ಸಕಾರಾತ್ಮಕ ಪಾಲನೆಯನ್ನು ಆರಂಭಿಸಲು ಇದು ಸಕಾಲವಾಗಿದೆ. ಪೋಷಕರಿಗೆ ತರಗತಿ ನಡೆಸಿ ಸಕಾರಾತ್ಮಕ ಪಾಲನೆ ಹಾಗೂ ಅದರ ಅನುಕೂಲತೆಯ ಬಗ್ಗೆ ಅವರಿಗೆ ಕಲಿಸುವ ಅಗತ್ಯವಿದೆ. ಕಾಲ ಮಿಂಚುವ ಮೊದಲೇ ವಿದ್ಯಾರ್ಥಿಗಳ ಮನಸ್ಥಿತಿಯನ್ನು ತಿಳಿದುಕೊಳ್ಳಬೇಕು ಎಂದು ‘ಸ್ಟಡಿ ಹಾಲ್ ಎಜುಕೇಶನ್ ಫೌಂಡೇಶನ್’ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಊರ್ವಶಿ ಸಾಹ್ನಿ ಹೇಳಿದ್ದಾರೆ.

ಶಾಲೆಗಳಲ್ಲಿ ಶೌಚಾಲಯದ ಸ್ಥಳ ಬದಲಾಯಿಸುವ ಅಗತ್ಯವಿದೆ ಹಾಗೂ ಶೌಚಾಲಯದ ಪ್ರವೇಶದ್ವಾರದ ಬಳಿ ಸಿಸಿಟಿವಿ ಕ್ಯಾಮೆರಾಗಳನ್ನು ಸ್ಥಾಪಿಸಬೇಕೆಂದು ಕೆಲವು ಶಿಕ್ಷಣತಜ್ಞರು ಅಭಿಪ್ರಾಯಪಟ್ಟರು.

 ತಮ್ಮ ಶಾಲೆಯ ಶೌಚಾಲಯದ ಪ್ರವೇಶದ್ವಾರದ ಬಳಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದು ಒಬ್ಬ ಪುರುಷ ಹಾಗೂ ಮಹಿಳಾ ಕಾವಲುಗಾರರನ್ನು ಅಲ್ಲಿ ನಿಯೋಜಿಸಲಾಗಿದೆ ಎಂದು ಹೋರ್ನರ್ ಕಾಲೇಜಿನ ಪ್ರಾಂಶುಪಾಲೆ ಮಾಲಾ ಮೆಹ್ರಾ ತಿಳಿಸಿದ್ದಾರೆ. ಶೌಚಾಲಯಗಳನ್ನು ಏಕಾಂತಪ್ರದೇಶದಲ್ಲಿ ನಿರ್ಮಿಸುವ ಬದಲು ಕಟ್ಟಡದ ಮಧ್ಯಭಾಗದಲ್ಲಿ ನಿರ್ಮಿಸಿದರೆ ಇಂತಹ ಘಟನೆಗಳನ್ನು ತಡೆಗಟ್ಟಲು ಸಾಧ್ಯ . ಅಲ್ಲದೆ ಮಾಧ್ಯಮಗಳು ಇಂತಹ ಘಟನೆಗಳ ಸುದ್ದಿಯನ್ನು ಪ್ರಸಾರ ಮಾಡುವಾಗ ಮಕ್ಕಳ ಮನದಲ್ಲಿ ಬಲವಾದ ಪರಿಣಾಮ ಬೀರುವಂತೆ ಪ್ರಸಾರ ಮಾಡಬೇಕು ಎಂದವರು ಅಭಿಪ್ರಾಯಪಟ್ಟರು. ನೈತಿಕ ಮೌಲ್ಯಗಳು ತೀವ್ರವಾಗಿ ಕುಸಿಯುತ್ತಿರುವುದು ಇಂತಹ ಘಟನೆಗಳಿಗೆ ಕಾರಣ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

 ಮಕ್ಕಳು ಇಂದು ತೀವ್ರ ಒತ್ತಡದಲ್ಲಿದ್ದಾರೆ. ಶಾಲೆಯ ಪಾಠ, ಹೋಂವರ್ಕ್, ಪ್ರಾಜೆಕ್ಟ್‌ವರ್ಕ್, ಟ್ಯೂಷನ್, ಪರೀಕ್ಷೆ ಹೀಗೆ ಸದಾ ಒತ್ತಡದಲ್ಲೇ ಇರುವ ಮಕ್ಕಳು ಅದರಿಂದ ಪಾರಾಗಲು ಕೆಟ್ಟ ಕೆಲಸ ನಡೆಸಲು ಮುಂದಾಗಬಹುದು. ಆದ್ದರಿಂದ ಮಕ್ಕಳ ಒತ್ತಡ ನಿವಾರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಉ.ಪ್ರದೇಶ ಮಾಧ್ಯಮಿಕ ಶಿಕ್ಷಕರ ಸಂಘದ ರಾಜ್ಯ ಕಾರ್ಯದರ್ಶಿ ಹಾಗೂ ಕ್ವೀನ್ಸ್ ಇಂಟರ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಆರ್.ಪಿ.ಮಿಶ್ರಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News