ಅಮಿತ್ ಶಾ ಖುಲಾಸೆಯನ್ನು ಪ್ರಶ್ನಿಸದ ಸಿಬಿಐ ವಿರುದ್ಧ ಪಿಐಎಲ್ ದಾಖಲು

Update: 2018-01-19 13:41 GMT

ಮುಂಬೈ,ಜ.19: ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಖುಲಾಸೆಗೊಳಿಸಿರುವ ಕೆಳ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸದಿರುವ ಸಿಬಿಐ ನಿರ್ಧಾರದ ವಿರುದ್ಧ ಮುಂಬೈ ವಕೀಲರ ಸಂಘ(ಬಿಎಲ್‌ಎ)ವು ಶುಕ್ರವಾರ ಬಾಂಬೆ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಯನ್ನು ದಾಖಲಿಸಿದೆ.

ಶಾ ಅವರನ್ನು ಬಿಡುಗಡೆಗೊಳಿಸಿರುವ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಪುನರ್‌ಪರಿಶೀಲನೆ ಅರ್ಜಿಯನ್ನು ಸಲ್ಲಿಸುವಂತೆ ಸಿಬಿಐಗೆ ನಿರ್ದೇಶವನ್ನು ಹೊರಡಿಸುವಂತೆ ಬಿಎಲ್‌ಎ ತನ್ನ ಅರ್ಜಿಯಲ್ಲಿ ಉಚ್ಚ ನ್ಯಾಯಾಲಯವನ್ನು ಆಗ್ರಹಿಸಿದೆ.

ನ್ಯಾಯಮೂರ್ತಿಗಳಾದ ಎಸ್.ಸಿ.ಧರ್ಮಾಧಿಕಾರಿ ಮತ್ತು ಭಾರತಿ ಡಾಂಗ್ರೆ ಅವರ ಪೀಠವು ಜ.22ರಂದು ಅರ್ಜಿಯನ್ನು ಪರಿಶೀಲಿಸಲಿದೆ ಎಂದು ಅರ್ಜಿದಾರರ ಪರ ವಕೀಲ ಅಹ್ಮದ್ ಅಬಿದಿ ಅವರು ಸುದ್ದಿಗಾರರಿಗೆ ತಿಳಿಸಿದರು.

ಸಿಬಿಐ ದೇಶದ ಪ್ರಮುಖ ತನಿಖಾ ಸಂಸ್ಥೆಯಾಗಿದ್ದು, ಕಾನೂನಿನಂತೆ ಕಾರ್ಯ ನಿರ್ವಹಣೆ ಅದರ ಕರ್ತವ್ಯವಾಗಿದೆ. ಆದರೆ ತನ್ನ ಕರ್ತವ್ಯ ನಿರ್ವಹಣೆಯಲ್ಲಿ ಅದು ದಯನೀಯವಾಗಿ ವಿಫಲಗೊಂಡಿದೆ ಎಂದು ಅರ್ಜಿಯು ಹೇಳಿದೆ.

 ವಿಚಾರಣಾ ನ್ಯಾಯಾಲಯವು ರಾಜಸ್ಥಾನದ ಇಬ್ಬರು ಪಿಎಸ್‌ಐಗಳಾದ ಹಿಮಾಂಶು ಸಿಂಗ್ ಮತ್ತು ಶ್ಯಾಮಸಿಂಗ್ ಹಾಗೂ ಗುಜರಾತ್‌ನ ಹಿರಿಯ ಪೊಲೀಸ್ ಅಧಿಕಾರಿ ಎನ್.ಕೆ.ಅಮೀನ್ ಅವರನ್ನೂ ಇದೇ ರೀತಿ ಖುಲಾಸೆಗೊಳಿಸಿತ್ತು ಎಂದು ತಿಳಿಸಿರುವ ಅರ್ಜಿಯು, ಈ ಮೂವರ ಖುಲಾಸೆಯನ್ನು ಸಿಬಿಐ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದೆ ಎನ್ನುವುದು ತಿಳಿದು ಬಂದಿದೆ. ಆಯ್ದ ಆರೋಪಿಗಳ ಖುಲಾಸೆಯನ್ನು ಪ್ರಶ್ನಿಸಿರುವ ಸಿಬಿಐ ಕ್ರಮವು ನಿರಂಕುಶ ಮತ್ತು ಅಸಮಂಜಸವಾಗಿದೆ ಹಾಗೂ ದುರುದ್ದೇಶದಿಂದ ಕೂಡಿದೆ ಎಂದು ಆರೋಪಿಸಿದೆ. ಗುಜರಾತ್ ಮತ್ತು ರಾಜಸ್ಥಾನ ಪೊಲೀಸರು 2005ರಲ್ಲಿ ನಕಲಿ ಎನ್‌ಕೌಂಟರ್‌ನಲ್ಲಿ ಸೊಹ್ರಾಬುದ್ದೀನ್ ಶೇಖ್, ಆತನ ಪತ್ನಿ ಕೌಸರ್‌ಬಿ ಮತ್ತು ಸಹವರ್ತಿ ತುಳಸಿ ಪ್ರಜಾಪತಿ ಅವರನ್ನು ಹತ್ಯೆಗೈದಿದ್ದರು.

2010,ಫೆಬ್ರವರಿಯಲ್ಲಿ ಪ್ರಕರಣವನ್ನು ವಹಿಸಿಕೊಂಡಿದ್ದ ಸಿಬಿಐ ಅದೇ ವರ್ಷದ ಜುಲೈನಲ್ಲಿ ಆಗಿನ ಗುಜರಾತ್ ಗೃಹಸಚಿವ ಶಾ ಸೇರಿದಂತೆ 23 ಆರೋಪಿಗಳ ವಿರುದ್ಧ ಆರೋಪ ಪಟ್ಟಿಯನ್ನು ಸಲ್ಲಿಸಿತ್ತು. ಮೂವರು ಐಪಿಎಸ್ ಅಧಿಕಾರಿಗಳು ಸೇರಿದಂತೆ ಪ್ರಕರಣದಲ್ಲಿಯ ಹಲವಾರು ಆರೋಪಿಗಳನ್ನು ವಿಚಾರಣಾ ನ್ಯಾಯಾಲಯವು ಬಿಡುಗಡೆಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News