ಜೊಕೊವಿಕ್‌ಗೆ ಕೊರಿಯಾದ ಚುಂಗ್ ಶಾಕ್

Update: 2018-01-22 18:19 GMT

ಮೆಲ್ಬೋರ್ನ್, ಜ.22: ದಕ್ಷಿಣ ಕೊರಿಯಾದ ಚುಂಗ್ ಹಿಯೊನ್ ಆರು ಬಾರಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಆಗಿರುವ ನೊವಾಕ್ ಜೊಕೊವಿಕ್‌ರನ್ನು ಸೋಲಿಸಿ ಶಾಕ್ ನೀಡಿದ್ದಾರೆ.

ಸೋಮವಾರ ರಾತ್ರಿ 3 ಗಂಟೆ, 21 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್‌ನ ನಾಲ್ಕನೇ ಸುತ್ತಿನ ಪಂದ್ಯದಲ್ಲಿ 21ರ ಹರೆಯದ ಚುಂಗ್ ಸರ್ಬಿಯ ಆಟಗಾರ ಜೊಕೊವಿಕ್‌ರನ್ನು 7-6(7/4), 7-5, 7-6(7/3) ಸೆಟ್‌ಗಳಿಂದ ಮಣಿಸಿದರು.

ಚುಂಗ್ ಆಸ್ಟ್ರೇಲಿಯನ್ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ತೇರ್ಗಡೆಯಾದ ದಕ್ಷಿಣ ಕೊರಿಯಾದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಚುಂಗ್ ಬುಧವಾರ ನಡೆಯಲಿರುವ ಕ್ವಾರ್ಟರ್ ಫೈನಲ್‌ನಲ್ಲಿ ಅಮೆರಿಕ ಬೋಲ್ಟರ್ ಟೆನಿಸ್ ಸ್ಯಾಂಡ್‌ಗ್ರೆನ್‌ರನ್ನು ಎದುರಿಸಲಿದ್ದಾರೆ.

2 ವರ್ಷಗಳ ಹಿಂದೆ ಜೊಕೊವಿಕ್ ಆಸ್ಟ್ರೇಲಿಯನ್ ಓಪನ್‌ನ ಮೊದಲನೇ ಸುತ್ತಿನ ಪಂದ್ಯದಲ್ಲಿ ಕೊರಿಯಾ ಆಟಗಾರ ಚುಂಗ್‌ರನ್ನು ನೇರ ಸೆಟ್‌ಗಳಿಂದ ಮಣಿಸಿದ್ದರು. ಇದೀಗ ಆ ಸೋಲಿಗೆ ಚುಂಗ್ ಸೇಡು ತೀರಿಸಿಕೊಂಡಿದ್ದಾರೆ.

ಬಲಮಣಿಕಟ್ಟು ಹಾಗೂ ಬೆನ್ನುನೋವು ಸಮಸ್ಯೆ ಎದುರಿಸುತ್ತಿರುವ ಜೊಕೊವಿಕ್ ಗಾಯದ ಸಮಸ್ಯೆಗೆ ಚಿಕಿತ್ಸೆ ಪಡೆದು ಹೋರಾಟವನ್ನು ಮುಂದುವರಿಸಿದರು.

ಜಪಾನ್ ಆಟಗಾರ್ತಿಗೆ ಸೋಲುಣಿಸಿದ ಹಾಲೆಪ್

ವಿಶ್ವದ ನಂ.1 ಆಟಗಾರ್ತಿ ಸಿಮೊನಾ ಹಾಲೆಪ್ ಜಪಾನ್‌ನ ಉದಯೋನ್ಮುಖ ಆಟಗಾರ್ತಿ ನಯೊಮಿ ಒಸಾಕಾರನ್ನು 6-3, 6-2 ನೇರ ಸೆಟ್‌ಗಳಿಂದ ಸೋಲಿಸಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.

20ರ ಹರೆಯದ ಒಸಾಕಾ ಆರಂಭದಲ್ಲಿ ರೊಮಾನಿಯ ಆಟಗಾರ್ತಿ ಹಾಲೆಪ್‌ಗೆ ತೀವ್ರ ಪೈಪೋಟಿ ನೀಡಿದರು. ಚೊಚ್ಚಲ ಗ್ರಾನ್‌ಸ್ಲಾಮ್ ಪ್ರಶಸ್ತಿ ನಿರೀಕ್ಷೆಯಲ್ಲಿರುವ ಹಾಲೆಪ್ 72ನೇ ರ್ಯಾಂಕಿನ ಒಸಾಕಾಗೆ ಸೋಲಿನ ಕಹಿ ಉಣಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News