×
Ad

ಗಗನಕ್ಕೇರಿದ ಪೆಟ್ರೋಲ್ ಬೆಲೆ; ಡೀಸೆಲ್ ಕೂಡಾ ತುಟ್ಟಿ

Update: 2018-01-24 18:48 IST

ಹೊಸದಿಲ್ಲಿ, ಜ.24: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯು ಬುಧವಾರವೂ ಏರುಗತಿಯಲ್ಲೇ ಸಾಗಿದ್ದು ರಾಷ್ಟ್ರ ರಾಜಧಾನಿ ಮತ್ತು ಇತರ ಮೆಟ್ರೊ ನಗರಗಳಲ್ಲಿ ದಾಖಲೆಯ ಏರಿಕೆಯನ್ನು ಕಂಡಿದೆ. ದಿಲ್ಲಿಯಲ್ಲಿ ಪೆಟ್ರೋಲ್ ಬೆಲೆಯು 72.43ಕ್ಕೆ ತಲುಪಿದ್ದು ಇದು ಮೂರು ವರ್ಷಗಳಲ್ಲೇ ಅತ್ಯಧಿಕವಾಗಿದೆ. ಭಾರತೀಯ ತೈಲ ನಿಗಮದ ಪ್ರಕಾರ 2014ರ ಆಗಸ್ಟ್‌ನಲ್ಲಿ ಪೆಟ್ರೋಲ್ 72.51 ರೂ. ತಲುಪಿತ್ತು. ಕೊಲ್ಕತ್ತಾ, ಮುಂಬೈ ಮತ್ತು ಚೆನ್ನೈಯಲ್ಲೂ ಪೆಟ್ರೋಲ್ ಕ್ರಮವಾಗಿ 75.13 ರೂ., 80.30 ರೂ. ಮತ್ತು 75.12 ರೂ. ಬೆಲೆಗೆ ಮಾರಾಟವಾಗುತ್ತಿದೆ.

ಇದೇ ರೀತಿ ಡೀಸೆಲ್ ಬೆಲೆಯಲ್ಲೂ ಬುಧವಾರ ಮತ್ತೆ ಏರಿಕೆ ಕಂಡಿದೆ. ದಿಲ್ಲಿಯಲ್ಲಿ ಡೀಸೆಲ್ ಬೆಲೆ 63.38ಕ್ಕೆ ಏರಿದ್ದರೆ ಕೊಲ್ಕತ್ತಾ, ಮುಂಬೈ ಮತ್ತು ಚೆನ್ನೈಯಲ್ಲಿ ಕ್ರಮವಾಗಿ 66.04 ರೂ., 67.50 ರೂ. ಹಾಗೂ 66.84 ರೂ. ತಲುಪಿದೆ.

ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಸ್ಥೆಗಳಲ್ಲಿ ಉತ್ಪಾದನೆಯ ಮೇಲಿನ ನಿರ್ಬಂಧ ಮತ್ತು ಕಚ್ಚಾ ತೈಲಕ್ಕೆ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ತೈಲ ಬೆಲೆಯಲ್ಲಿ ಏರಿಕೆಯುಂಟಾಗಿದೆ. ಜನವರಿ 24ರ ವೇಳೆಗೆ ಬ್ರೆಂಟ್ ಕಚ್ಚಾ ತೈಲ ಬೆಲೆಯು ಬ್ಯಾರಲ್‌ಗೆ 70 ಡಾಲರ್ ತಲುಪಿತ್ತು.

ಅದಲ್ಲದೆ, ಭಾರತದಲ್ಲಿ ಅಂತಾರಾಷ್ಟ್ರೀಯ ಬದಲಾವಣೆಗಳಿಗೆ ಅನುಸಾರವಾಗಿ ತೈಲ ಬೆಲೆಯಲ್ಲಿ ಪ್ರತಿದಿನ ಪರಿಷ್ಕರಣೆ ಮಾಡಲು ಸಾಧ್ಯವಿರುವ ಕಾರಣದಿಂದಲೂ ತೈಲ ಬೆಲೆಯಲ್ಲಿ ಏರಿಕೆಯಾಗುತ್ತಿದೆ. ಈ ಹಿಂದೆ ತೈಲ ಬೆಲೆ ಏರಿಕೆ ಮಾಡಲು ತೈಲ ಕಂಪೆನಿಗಳಿಗೆ ಹದಿನೈದು ದಿನಗಳ ಅವಧಿಯನ್ನು ನೀಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News