ಪಾಕಿಸ್ತಾನಕ್ಕೆ ಟ್ವೆಂಟಿ-20 ಸರಣಿ: ನ್ಯೂಝಿಲೆಂಡ್‌ಗೆ ಸೋಲು

Update: 2018-01-28 18:24 GMT

ಹ್ಯಾಮಿಲ್ಟನ್, ಜ.28: ಸರಣಿ ನಿರ್ಣಾಯಕ ಮೂರನೇ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ನ್ಯೂಝಿಲೆಂಡ್‌ನ್ನು 18 ರನ್‌ಗಳಿಂದ ಮಣಿಸಿದ ಪಾಕಿಸ್ತಾನ 2-1 ಅಂತರದಿಂದ ಸರಣಿಯನ್ನು ಜಯಿಸಿದೆ.

ರವಿವಾರ ನಡೆದ ಪಂದ್ಯದಲ್ಲಿ ರೋಚಕ ಜಯ ಸಾಧಿಸಿರುವ ಪಾಕ್ ವಿಶ್ವ ಟ್ವೆಂಟಿ-20 ರ್ಯಾಂಕಿಂಗ್‌ನಲ್ಲಿ ನ್ಯೂಝಿಲೆಂಡ್‌ನ್ನು ಹಿಂದಿಕ್ಕಿ ನಂ.1 ಸ್ಥಾನ ಗಿಟ್ಟಿಸಿಕೊಂಡಿದೆ.

 ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 181 ರನ್ ಗಳಿಸಿತು. ಅಗ್ರ ಕ್ರಮಾಂಕದಲ್ಲಿ ಫಾಖರ್ ಝಮಾನ್ 36 ಎಸೆತಗಳಲ್ಲಿ 46 ರನ್ ಗಳಿಸಿದರು. ಉಮರ್ ಆಮಿನ್(21, 7 ಎಸೆತ) ಕೊನೆಯ 4 ಓವರ್‌ನಲ್ಲಿ ಅಬ್ಬರಿಸಿ 58 ರನ್ ಕಲೆ ಹಾಕಲು ನೆರವಾದರು..

ಗೆಲ್ಲಲು ಕಠಿಣ ಗುರಿ ಪಡೆದ ಕಿವೀಸ್ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 163 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಕಿವೀಸ್ ಪರ ಮಾರ್ಟಿನ್ ಗಪ್ಟಿಲ್(59) ಗರಿಷ್ಠ ಸ್ಕೋರ್ ಗಳಿಸಿದರು. ರಾಸ್ ಟೇಲರ್ 10 ಎಸೆತಗಳಲ್ಲಿ 25 ರನ್ ಗಳಿಸಿದರು. 17ನೇ ಓವರ್‌ನಲ್ಲಿ ಟೇಲರ್ ಔಟಾದ ಬಳಿಕ ಕಿವೀಸ್ ಗೆಲುವಿನ ಆಸೆ ಕೈಬಿಟ್ಟಿತು.

 ಎರಡನೇ ಪಂದ್ಯದಲ್ಲಿ 48 ರನ್‌ಗಳಿಂದ ಸೋತಿದ್ದ ಕಿವೀಸ್ ಸತತ 2ನೇ ಸೋಲು ಕಂಡಿತು. 5 ಪಂದ್ಯಗಳ ಏಕದಿನ ಸರಣಿಯನ್ನು 5-0 ಅಂತರದಿಂದ ಗೆದ್ದುಕೊಂಡಿದ್ದ ನ್ಯೂಝಿಲೆಂಡ್ ಮೊದಲ ಟ್ವೆಂಟಿ-20 ಪಂದ್ಯವನ್ನು ಜಯಿಸಿ ಉತ್ತಮ ಆರಂಭ ಪಡೆದಿತ್ತು.

ಸಂಕ್ಷಿಪ್ತ ಸ್ಕೋರ್

►ಪಾಕಿಸ್ತಾನ: 20 ಓವರ್‌ಗಳಲ್ಲಿ 181/6

(ಫಾಖರ್ ಝಮಾನ್ 46, ಸರ್ಫರಾಝ್ 29, ಉಮರ್ ಆಮಿನ್ 21, ಸೋಧಿ 2-47, ಸ್ಯಾಂಟ್ನರ್ 2-24)

►ನ್ಯೂಝಿಲೆಂಡ್: 20 ಓವರ್‌ಗಳಲ್ಲಿ 163/6

(ಗಪ್ಟಿಲ್ 59, ಟೇಲರ್ 25, ಬ್ರೂಸ್ 22, ಶಾದಾಬ್ ಖಾನ್ 2-19)

►ಪಂದ್ಯಶ್ರೇಷ್ಠ: ಶಾದಾಬ್ ಖಾನ್

►ಸರಣಿಶ್ರೇಷ್ಠ: ಮುಹಮ್ಮದ್ ಆಮಿರ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News