×
Ad

ಇಂಡಿಯಾ ಓಪನ್: ಸಿಂಧು ಸೆಮಿಫೈನಲ್‌ಗೆ; ಪ್ರಣೀತ್, ಕಶ್ಯಪ್‌ಗೆ ಸೋಲು

Update: 2018-02-02 23:20 IST

ಹೊಸದಿಲ್ಲಿ, ಫೆ.2: ಇಂಡಿಯಾ ಓಪನ್ ಸೂಪರ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಪಿ.ವಿ.ಸಿಂಧು ಸೆಮಿ ಫೈನಲ್‌ಗೆ ತಲುಪಿದ್ದಾರೆ. ಈ ಮೂಲಕ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.

ಶುಕ್ರವಾರ ಇಲ್ಲಿ 35 ನಿಮಿಷಗಳ ಕಾಲ ನಡೆದ ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸಿಂಧು ಸ್ಪೇನ್‌ನ ವಿಶ್ವದ ನಂ.36ನೇ ಆಟಗಾರ್ತಿ ಬೀಟ್ರಿಝ್ ಕೊರ್ರಲ್ಸ್ ರನ್ನು 21-12, 19-21, 21-11 ಗೇಮ್‌ಗಳಿಂದ ಮಣಿಸಿದರು.

ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತೆ ಸಿಂಧು ಸೆಮಿ ಫೈನಲ್‌ನಲ್ಲಿ 2013ರ ವಿಶ್ವ ಚಾಂಪಿಯನ್ ರಚನೊಕ್ ಇಂತನಾನ್‌ರನ್ನು ಎದುರಿಸಲಿದ್ದಾರೆ.

ಇದೇ ವೇಳೆ, ಪಿ.ಕಶ್ಯಪ್ ಹಾಗೂ ಬಿ.ಸಾಯಿ ಪ್ರಣೀತ್ ಪುರುಷರ ಸಿಂಗಲ್ಸ್‌ನಲ್ಲಿ ನೇರ ಗೇಮ್‌ಗಳ ಅಂತರದಿಂದ ಸೋತು ಟೂರ್ನಿಯಿಂದ ನಿರ್ಗಮಿಸಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಕಶ್ಯಪ್ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಚೀನಾದ ಕ್ವಿಯಾವೊ ಬಿನ್ ವಿರುದ್ಧ 16-21, 18-21 ಗೇಮ್‌ಗಳಿಂದ ಶರಣಾಗಿದ್ದಾರೆ. 8ನೇ ಶ್ರೇಯಾಂಕದ ಪ್ರಣೀತ್ ಮತ್ತೊಂದು ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ತೈವಾನ್‌ನ ಚೌ ಟಿಯೆನ್ ಚೆನ್ ವಿರುದ್ಧ 15-21, 13-21 ಅಂತರದಿಂದ ಸೋತಿದ್ದಾರೆ.

ಭಾರತದ ಆರನೇ ಶ್ರೇಯಾಂಕದ ಮಹಿಳಾ ಡಬಲ್ಸ್ ಜೋಡಿ ಅಶ್ವಿನಿ ಪೊನ್ನಪ್ಪ ಹಾಗೂ ಎನ್.ಸಿಕ್ಕಿ ರೆಡ್ಡಿ ಚೀನಾದ ಜೋಡಿ ಡು ಯು ಹಾಗೂ ಲೀ ಯಿನ್‌ಹುಯ್ ವಿರುದ್ಧ 17-21, 21-23 ಗೇಮ್‌ಗಳಿಂದ ಸೋತಿದ್ದಾರೆ.

ಅಗ್ರ ಶ್ರೇಯಾಂಕದ ಮಾರ್ಕಸ್ ಫೆರ್ನಾಲ್ಡಿ ಹಾಗೂ ಕೆವಿನ್ ಸಂಜಯ್ ಭಾರತದ ಪುರುಷರ ಡಬಲ್ಸ್ ಜೋಡಿ ಮನು ಅತ್ರಿ ಹಾಗೂ ಸುಮೀತ್ ರೆಡ್ಡಿ ಅವರನ್ನು 21-19, 21-19 ಗೇಮ್‌ಗಳಿಂದ ಸೋಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News