ಹರ್ಯಾಣದಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳಿಗೆ ಥಳಿತ:ಮೂವರು ಆರೋಪಿಗಳ ಬಂಧನ

Update: 2018-02-03 13:46 GMT

ಮಹೇಂದ್ರಗಢ,ಫೆ.3: ಶುಕ್ರವಾರ ಸಂಜೆ ಹರ್ಯಾಣದ ಮಹೇಂದ್ರಗಡದಲ್ಲಿ ಜಮ್ಮು-ಕಾಶ್ಮೀರದ ಇಬ್ಬರು ವಿದ್ಯಾರ್ಥಿಗಳನ್ನು ಥಳಿಸಿದ್ದಕ್ಕಾಗಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

 ಸ್ಥಳೀಯ ಮಾರುಕಟ್ಟೆ ಪ್ರದೇಶದಲ್ಲಿ ಶುಕ್ರವಾರದ ನಮಾಝ್ ಮುಗಿಸಿಕೊಂಡು ತಮ್ಮ ಬೈಕ್ ಹತ್ತುತ್ತಿದ್ದಾಗ 15-20 ಜನರ ಗುಂಪೊಂದು ತಮ್ಮನ್ನು ಸುತ್ತುವರಿದು ವಿನಾಕಾರಣ ದೊಣ್ಣೆಗಳು, ಇಟ್ಟಿಗೆಗಳು ಮತ್ತು ಹೆಲ್ಮೆಟ್‌ಗಳಿಂದ ಹಲ್ಲೆ ನಡೆಸಿತ್ತು ಎಂದು ರಾಜ್ಯದ ಕೇಂದ್ರೀಯ ವಿವಿಯ ವಿದ್ಯಾರ್ಥಿಗಳಾದ ಅಫ್ತಾಬ್ ಅಹ್ಮದ್ ಮತ್ತು ಅಮ್ಜದ್ ತಿಳಿಸಿದರು.

ಆದರೆ ಈ ವಿದ್ಯಾರ್ಥಿಗಳ ಬೈಕ್ ಸಣ್ಣ ಅಪಘಾತಕ್ಕೀಡಾದ ಬಳಿಕ ಅವರಿಗೂ ಇಬ್ಬರೂ ಸ್ಥಳೀಯರಿಗೂ ವಾಗ್ವಾದ ನಡೆದಿತ್ತು. ಸ್ಥಳೀಯರು ಇನ್ನಷ್ಟು ಜನರನ್ನು ಕರೆಸಿದ್ದು, ಗುಂಪು ವಿದ್ಯಾರ್ಥಿಗಳಿಗೆ ಥಳಿಸಿದೆ ಎಂದು ಪೊಲೀಸರು ಹೇಳಿದರು.

ಗಾಯಗೊಂಡಿದ್ದ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆಯ ಬಳಿಕ ಬಿಡುಗಡೆ ಗೊಳಿಸಲಾಗಿದೆ. ಅವರ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಹರ್ಯಾಣ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಾವು ಸಂತ್ರಸ್ತ ವಿದ್ಯಾರ್ಥಿ ಗಳೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಜಮ್ಮು-ಕಾಶ್ಮೀರದ ಪೊಲೀಸ್ ಅಧಿಕಾರಿ ಯೋರ್ವರು ತಿಳಿಸಿದ್ದಾರೆ.

ಜಮ್ಮು -ಕಾಶ್ಮೀರದ ಡಿಜಿಪಿ ಎಸ್.ಪಿ. ವೈದ್ ಅವರು ಹರ್ಯಾಣ ಡಿಜಿಪಿಯೊಡನೆ ಸಂಪರ್ಕದಲ್ಲಿರುವುದಾಗಿ ತಿಳಿಸಿದರು.

ಆರೋಪಿಗಳ ವಿರುದ್ಧ ಕಠಿಣ ಕ್ರಮಗಳನ್ನು ಜರಗಿಸುವಂತೆ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರು ಹರ್ಯಾಣದ ಮುಖ್ಯಮಂತ್ರಿ ನಟವರಲಾಲ್ ಖಟ್ಟರ್ ಅವರನ್ನು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News