ಶೇರುಪೇಟೆಯಲ್ಲಿ ಕುಸಿತದ ಅಲೆ: 3 ದಿನಗಳಲ್ಲಿ ಕೊಚ್ಚಿ ಹೋಯಿತು 9.6 ಲಕ್ಷ ಕೋಟಿ ರೂ.!
ಮುಂಬೈ, ಫೆ.6: ಜಾಗತಿಕ ಮಾರುಕಟ್ಟೆಯಲ್ಲಿ ಹೂಡಿಕೆದಾರರು ತಮ್ಮ ಶೇರುಗಳನ್ನು ಮಾರಾಟ ಮಾಡಲು ಮುಂದಾದ ಪರಿಣಾಮ ಶೇರುಪೇಟೆಯಲ್ಲಿ ಉಂಟಾದ ದಿಢೀರ್ ಕುಸಿತವು ಮುಂದುವರಿದಿದ್ದು ಮೂರೇ ದಿನಗಳಲ್ಲಿ ಹೂಡಿಕೆದಾರರು 9.6 ಲಕ್ಷ ಕೋಟಿ ರೂ. ವನ್ನು ಕಳೆದುಕೊಂಡಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿದೆ.
ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಸೆನ್ಸೆಕ್ಸ್ ಮಂಗಳವಾರದಂದು 1,274.35 ಅಂಕಗಳ ಕುಸಿತ ಕಂಡಿದ್ದು ದಿನದಂತ್ಯಕ್ಕೆ 33,482.81ಕ್ಕೆ ತಲುಪಿದೆ. ಫೆಬ್ರವರಿ ಒಂದರಂದು ಕೇಂದ್ರ ಮುಂಗಡಪತ್ರಕ್ಕೂ ಮುನ್ನ ಶೇರು ಸೂಚ್ಯಂಕವು 2,164.11 ಅಂಕಗಳ ಕುಸಿತ ಕಂಡಿತ್ತು.
ನಿರಂತರ ಮಾರಾಟದ ಪರಿಣಾಮವಾಗಿ ಬಿಎಸ್ಸಿಯಲ್ಲಿ ಪಟ್ಟಿ ಮಾಡಲಾಗಿರುವ ಕಂಪೆನಿಗಳ ಮಾರುಕಟ್ಟೆ ಬಂಡವಾಳೀಕರಣವು 9,60,938 ಕೋಟಿ ರೂ.ನಿಂದ 1,43,39,062 ಕೋಟಿ ರೂ.ಗೆ ಕುಸಿಯಿತು. ಸೋಮವಾರದಂದು ಸೆನ್ಸೆಕ್ಸ್ 309.59 ಅಂಕಗಳು ಅಥವಾ 0.88% ಕುಸಿತ ಕಂಡು 34,757.16 ಅಂಕಗಳಿಗೆ ಕೊನೆಯಾಯಿತು. ಶುಕ್ರವಾರದಂದು ಸೂಚ್ಯಂಕವು 839.91 ಅಂಕಗಳು ಅಥವಾ 2.34% ಕುಸಿತ ಕಂಡಿತ್ತು.
ಮಾತೃ ಮಾರುಕಟ್ಟೆ ಡೊವ್ 2,200 ಅಂಕಗಳ ಕುಸಿತ ಕಾಣುವ ಮೂಲಕ ಜಾಗತಿಕವಾಗಿ ಶೇರು ಮಾರುಕಟ್ಟೆಯಲ್ಲಿ ತಲ್ಲಣ ಮೂಡಿಸಿತು. ಯುಎಸ್ ಮಾರುಕಟ್ಟೆಯಲ್ಲಿ ಮಾರಾಟದ ಭರಾಟೆ ಹೆಚ್ಚಾದ ಪರಿಣಾಮ ಜಾಗತಿಕ ಮಾರುಕಟ್ಟೆಯಲ್ಲಿಯೂ ಹೂಡಿಕೆದಾರರನ್ನು ಶೇರುಗಳ ಮಾರಾಟಕ್ಕೆ ಪ್ರೋತ್ಸಾಹಿಸಿತು. ಈ ಕೆಳಮುಖ ಸವಾರಿಯಲ್ಲಿ ಭಾರತೀಯ ಮಾರುಕಟ್ಟೆಯು ಜಾಗತಿಕ ಮಾರುಕಟ್ಟೆಯೊಂದಿಗೆ ಹೆಜ್ಜೆಹಾಕುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ.
ಬಜೆಟ್‌ನಲ್ಲಿ ಸರಕಾರವು ಶೇರುಗಳ ಮೇಲೆ ದೀರ್ಘ ಕಾಲೀನ ಬಂಡವಾಳದ ಮೇಲಿನ ಲಾಭಕ್ಕೆ ಶೇ. 10 ತೆರಿಗೆ ವಿಧಿಸುವ ಪ್ರಸ್ತಾವನೆ ಮತ್ತು 2017-18ರ ವಿತ್ತೀಯ ವರ್ಷದಲ್ಲಿ ಹಣದುಬ್ಬರವು ಜಿಡಿಪಿಯ ಶೇ.3.5 ಆಗಲಿದೆ ಎಂದು ಅಂದಾಜಿಸಿದ ಪರಿಣಾಮ ಹೂಡಿಕೆದಾರರು ಶೇರುಗಳ ಮಾರಾಟಕ್ಕೆ ಮುಂದಾದರು. ಅದರ ಪರಿಣಾಮವಾಗಿ 200ಕ್ಕೂ ಅಧಿಕ ಶೇರುಗಳು ಮಂಗಳವಾರದಂದು 52 ವಾರಗಳಲ್ಲೇ ಅತ್ಯಂತ ಕೆಳಮಟ್ಟವನ್ನು ತಲುಪಿವೆ.