×
Ad

‘ಹಳೆಯ ಭಾರತ’ವನ್ನು ಬಯಸುತ್ತಿರುವ ಕಾಂಗ್ರೆಸ್‌ : ಪ್ರಧಾನಿ ಮೋದಿ

Update: 2018-02-07 20:16 IST

ಹೊಸದಿಲ್ಲಿ, ಫೆ. 7: ಸ್ವಾತಂತ್ರ್ಯದ ನಂತರ ಅನುಸರಿಸಲಾದ ತಪ್ಪು ನೀತಿಯಿಂದಾಗಿ ದೇಶ ಬಳಲುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಜನರ ಕಲ್ಯಾಣದ ಬಗ್ಗೆ ಗಮನ ಕೇಂದ್ರೀಕರಿಸುವ ಬದಲು ಒಂದು ಕುಟುಂಬದ ಬಗ್ಗೆ ವಿಜಯ ಗೀತೆ ಹಾಡುತ್ತಾ ಕಾಲ ಕಳೆದಿದೆ ಎಂದಿದ್ದಾರೆ. ಲೋಕಸಭೆಯಲ್ಲಿ ರಾಷ್ಟ್ರಪತಿ ಭಾಷಣದ ಬಳಿಕ ವಂದನಾ ನಿರ್ಣಯದ ಸಂದರ್ಭ ಪ್ರತಿಕ್ರಿಯಿಸಿದ ಮೋದಿ, ಕಾಂಗ್ರೆಸ್ ‘ಹಳೆಯ ಭಾರತ’ ವನ್ನು ಬಯಸುತ್ತಿದೆ. ಆದರೆ, ಬಿಜೆಪಿ ‘ಹೊಸ ಭಾರತ’ವನ್ನು ರೂಪಿಸಲು ಬಯಸುತ್ತಿದೆ ಎಂದರು. ‘ಕಾಂಗ್ರೆಸ್ ಮುಕ್ತ ಭಾರತ’ ಎಂಬ ಘೋಷಣೆ ನಮ್ಮದಲ್ಲ. ಈ ಘೋಷಣೆ ಮಾಡಿರುವುದು ಮಹಾತ್ಮಾ ಗಾಂಧಿ. ಸ್ವಾತಂತ್ರ್ಯದ ಬಳಿಕ ಕಾಂಗ್ರೆಸ್ ಪಕ್ಷದ ಅವಶ್ಯಕತೆ ಇರಲಿಲ್ಲ. ಆದುದರಿಂದ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಲು ಗಾಂಧಿ ಬಯಸಿದ್ದರು ಎಂದು ಅವರು ಹೇಳಿದರು.

ಕಾಂಗ್ರೆಸ್ ತನ್ನ ಶ್ರಮವನ್ನು ಒಂದು ಕುಟುಂಬದ ಹಿತಾಸಕ್ತಿಗಾಗಿ ವ್ಯಯಿಸಿತು. ಆದರೆ, ದೇಶದ ಹಿತಾಸಕ್ತಿಯನ್ನು ನಿರ್ಲಕ್ಷಿಸಿತು ಎಂದು ಅವರು ಹೇಳಿದರು.

ನಮಗೆ ಪ್ರಜಾಪ್ರಭುತ್ವದ ಬಗ್ಗೆ ಉಪನ್ಯಾಸ ನೀಡಬೇಡಿ. ಆದ್ಯಾದೇಶವನ್ನು ಹರಿದು ಮಾಧ್ಯಮದವರ ಮುಖಕ್ಕೆ ಎಸೆದಿರುವುದು ನಿಮ್ಮ ಪಕ್ಷದ ವರಿಷ್ಠರು. ಯುವ ಜನಾಂಗದ ಆಲೋಚನೆಗೆ ಅವಕಾಶ ನೀಡದೇ ಇರುವುದು ನಿಮ್ಮ ಪಕ್ಷದ ವರಿಷ್ಠರು ಎಂದು ಪ್ರಧಾನಿ ಹೇಳಿದರು.

 ಲೋಕಸಭೆಯಲ್ಲಿ ಪ್ರಧಾನಿ ಅವರು ಮಾತನಾಡುತ್ತಿದ್ದಂತೆ ವಿರೋಧ ಪಕ್ಷದ ಸಂಸದರು ಘೋಷಣೆಗಳನ್ನು ಕೂಗಿದರು. ಈ ಸಂದರ್ಭ ಮೋದಿ ಅವರು, ‘‘ನಿಮ್ಮ ಘೋಷಣೆಗಳು ನನ್ನ ದ್ವನಿಯನ್ನು ಕುಗ್ಗಿಸದು, ವಿರೋಧ ಪಕ್ಷದ ಸದಸ್ಯರು ನನ್ನ ಮಾತನ್ನು ಆಲಿಸುವಂತೆ ವಿನಂತಿಸುತ್ತೇನೆ’’ ಎಂದರು.

ನೀವು ದೇಶವನ್ನು ವಿಭಜಿಸಿದಿರಿ. ನೀವು ಬಿತ್ತಿದ ವಿಷ ಬೀಜದಿಂದ ಸ್ವಾತಂತ್ರ್ಯದ ದೊರಕಿದ 70 ವರ್ಷಗಳ ಬಳಿಕವೂ 125 ಕೋಟಿ ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಅವರು ಹೇಳಿದರು.

ನೂತನ ರಾಜ್ಯಗಳನ್ನು ರೂಪಿಸುವ ಬಗ್ಗೆ ಮಾತನಾಡುವಾಗ ಅಟಲ್ ಬಿಹಾರಿ ವಾಜಪೇಯಿ ಅವರು ಉತ್ತರಾಖಂಡ, ಜಾರ್ಖಂಡ್ ಹಾಗೂ ಛತ್ತೀಸ್‌ಗಢವನ್ನು ರೂಪಿಸಿರುವ ರೀತಿಯನ್ನು ನೆನಪು ಮಾಡಿಕೊಳ್ಳಬೇಕು. ಅವರು ನಿರ್ಧಾರ ಕೈಗೊಳ್ಳುವಲ್ಲಿ ದೂರದೃಷ್ಟಿ ಪ್ರದರ್ಶಿಸಿದ್ದರು. ಆದರೆ, ಕಾಂಗ್ರೆಸ್ ಆಂಧ್ರಪ್ರದೇಶವನ್ನು ವಿಭಾಗಿಸುವ ಕುರಿತಂತೆ ಗೊಂದಲ ಸೃಷ್ಟಿಸುತ್ತಿದೆ. ಅದು ಈ ವಿಷಯಕ್ಕೆ ಸಂಬಂಧಿಸಿ ಸಾಕಷ್ಟು ಚಿಂತನೆ ಹಾಗೂ ಸಂಶೋಧನೆ ನಡೆಸಿಲ್ಲ ಎಂದು ಪ್ರಧಾನಿ ಹೇಳಿದರು. 15 ಕಾಂಗ್ರೆಸ್ ಸಮಿತಿಗಳಲ್ಲಿ 12 ವಲ್ಲಭಬಾಯ್ ಪಟೇಲ್ ಅವರನ್ನು ಆಯ್ಕೆ ಮಾಡಿದ್ದವು. ಆದರೆ, 3 ಸಮಿತಿ ಯಾರನ್ನೂ ಆಯ್ಕೆ ಮಾಡಿಲ್ಲ. ಆದರೆ, ವಲ್ಲಭಬಾಯ್ ಪಟೇಲ್ ಅವರಿಗೆ ದೇಶದ ಚುಕ್ಕಾಣಿ ಹಿಡಿಯುವ ಅವಕಾಶವನ್ನೇ ನೀಡಲಿಲ್ಲ. ಇದು ಎಂತಹ ಪ್ರಜಾಪ್ರಭುತ್ವ ? ಒಂದು ವೇಳೆ ವಲ್ಲಭಬಾಯ್ ಪಟೇಲ್ ಪ್ರಧಾನಿಯಾಗಿದ್ದರೆ ಕಾಶ್ಮೀರ ಪಾಕಿಸ್ತಾನದ ಹಿಡಿತದಲ್ಲಿ ಇರುತ್ತಿರಲಿಲ್ಲ ಎಂದು ಅವರು ತಿಳಿಸಿದರು.

ನಮ್ಮ ಸರಕಾರ 2014ರಲ್ಲಿ ಅಧಿಕಾರ ಸ್ವೀಕರಿಸಿತು. ಈ ಸಂದರ್ಭ ಮೋದಿ ಯುಐಡಿಎಐಯನ್ನು ರದ್ದುಗೊಳಿಸುತ್ತದೆ ಎಂದು ಪ್ರತಿಪಕ್ಷ ಹುಯಿಲೆಬ್ಬಿಸಿತು. ಆದರೆ, ನಾವು ಆಧಾರ್ ಅನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತಂದೆವು. ಕೂಡಲೇ ಪ್ರತಿಪಕ್ಷದವರು ಆಧಾರ್‌ಗೆ ವಿರೋಧ ವ್ಯಕ್ತಪಡಿಸಿದರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News