ಬಿಜೆಪಿ ನಾಯಕರ ವಿರುದ್ಧದ ಪ್ರಕರಣ ಹಿಂದೆಗೆಯಲು ಜಿಲ್ಲಾಡಳಿತ ವಿರೋಧ

Update: 2018-02-09 16:26 GMT

ಮುಝಫ್ಫರ್‌ ನಗರ, ಫೆ. 9: ಅರುವತ್ತು ಜನರ ಸಾವು ಹಾಗೂ 40 ಸಾವಿರ ಜನರು ನಿರ್ವಸಿತರಾಗಲು ಕಾರಣವಾಗಿದ್ದ 2013ರ ಮುಝಫ್ಫರ್‌ ನಗರ ಗಲಭೆ ಪ್ರಕರಣವನ್ನು ಹಿಂದೆಗೆಯಲು ಮುಝಫ್ಫರ್‌ ನಗರದ ಜಿಲ್ಲಾಡಳಿತ ಒಲವು ವ್ಯಕ್ತಪಡಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  ಗಲಭೆ ಪ್ರಕರಣವನ್ನು ಹಿಂದೆಗೆಯುವುದಕ್ಕೆ ಸಂಬಂಧಿಸಿ ಉತ್ತರಪ್ರದೇಶ ಸರಕಾರದ ನ್ಯಾಯಾಂಗ ಇಲಾಖೆ ಮುಝಫ್ಫರ್‌ ನಗರ ಜಿಲ್ಲಾಡಳಿತಕ್ಕೆ ಎರಡು ಪತ್ರಗಳನ್ನು ಬರೆದಿದೆ. ಗಲಭೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಸಿಟ್) ಹಾಗೂ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ ಬಳಿಕ ನ್ಯಾಯಾಲಯ ಆರೋಪಿಗಳನ್ನು ಗಮನಕ್ಕೆ ತೆಗೆದುಕೊಂಡು ಇಂತಹ 10 ಪ್ರಕರಣಗಳನ್ನು ಹಿಂದೆ ತೆಗೆಯುವುದರ ಬಗ್ಗೆ ಅಭಿಪ್ರಾಯ ಕೋರಿದೆ. ಆದರೆ, ಇದಕ್ಕೆ ಜಿಲ್ಲಾಡಳಿತ ವಿರೋಧ ವ್ಯಕ್ತಪಡಿಸಿದೆ.

ಇದರಲ್ಲಿ ಕೆಲವು ಪ್ರಕರಣಗಳಲ್ಲಿ ಉತ್ತರಪ್ರದೇಶದ ಸಚಿವ ಸುರೇಶ್ ರಾಣಾ, ಕೇಂದ್ರದ ಮಾಜಿ ಸಚಿವ ಸಂಜೀವ್ ಬಲ್ಯಾನ್, ಸಂಸದ ಭರತೇಂದು ಸಿಂಗ್, ಶಾಸಕ ಉಮೇಶ್ ಮಲಿಕ್ ಹಾಗೂ ಬಿಜೆಪಿ ನಾಯಕಿ ಸಾಧ್ವಿ ಪ್ರಾಚಿ ಆರೋಪಿಗಳಾಗಿದ್ದಾರೆ.

 ಮುಝಫ್ಫರ್‌ ನಗರ ಜಿಲ್ಲಾ ದಂಡಾಧಿಕಾರಿಗೆ ಬರೆದ ಎರಡು ಪತ್ರದಲ್ಲಿ, ಸಾರ್ವಜನಿಕ ಹಿತಾಸಕ್ತಿಯಿಂದ ಪ್ರಕರಣಗಳನ್ನು ಹಿಂದೆಗೆಯಬಹುದೇ ಎಂಬ ಅಂಶ ಸೇರಿದಂತೆ 13 ಅಂಶಗಳ ಬಗ್ಗೆ ಮಾಹಿತಿಯನ್ನು ಉತ್ತರಪ್ರದೇಶ ನ್ಯಾಯಾಂಗ ಇಲಾಖೆ ಕೋರಿದೆ.

ನ್ಯಾಯದ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನ್ಯಾಯಾಂಗ ಇಲಾಖೆಯ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದೆ.

ನಿಷೇಧಾಜ್ಞೆ ಉಲ್ಲಂಘನೆ, ಸರಕಾರಿ ಉದ್ಯೋಗಿಗಳು ತಮ್ಮ ಕರ್ತವ್ಯ ನಿರ್ವಹಿಸಲು ಅಡ್ಡಿ ಉಂಟು ಮಾಡಿರುವುದು ಸೇರಿಂದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಕಲಂಗಳ ಅಡಿಯಲ್ಲಿ ಇವರು ಆರೋಪಗಳನ್ನು ಎದುರಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News