ಭಾರತಕ್ಕೆ ಚೊಚ್ಚಲ ಸರಣಿ ಗೆಲುವಿಗೆ ಒಂದೇ ಮೆಟ್ಟಿಲು

Update: 2018-02-09 18:21 GMT

ಜೋಹಾನ್ಸ್‌ಬರ್ಗ್, ಫೆ.9: ದಕ್ಷಿಣ ಆಫ್ರಿಕದಲ್ಲಿ ಏಕದಿನ ಕ್ರಿಕೆಟ್ ಸರಣಿಯಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ ಶನಿವಾರ ನಡೆಯಲಿರುವ ನಾಲ್ಕನೇ ಪಂದ್ಯದಲ್ಲಿ ಆಫ್ರಿಕವನ್ನು ಎದುರಿಸಲಿದ್ದು, ಈ ಪಂದ್ಯದಲ್ಲಿ ಜಯಿಸಿದರೆ ಏಕದಿನ ಟ್ರೋಫಿ ಭಾರತದ ಮಡಿಲಿಗೆ ಜಾರಲಿದೆ.

 ಆರು ಪಂದ್ಯಗಳ ಏಕದಿನ ಸರಣಿಯಲ್ಲಿ ಈಗಾಗಲೇ ನಡೆದಿರುವ ಮೂರು ಪಂದ್ಯಗಳಲ್ಲಿ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ ಆಫ್ರಿಕ ನೆಲದಲ್ಲಿ ಇದೇ ಮೊದಲ ಬಾರಿ ಸರಣಿಯನ್ನು ವಶಪಡಿಸಿಕೊಳ್ಳಲು ಇನ್ನೊಂದು ಪಂದ್ಯದಲ್ಲಿ ಗೆಲುವು ದಾಖಲಿಸಬೇಕಾಗಿದೆ.

 ದಕ್ಷಿಣ ಆಫ್ರಿಕ ತಂಡ ಒತ್ತಡದಲ್ಲಿ ಸಿಲುಕಿದೆ. ಸತತ ಮೂರು ಪಂದ್ಯಗಳಲ್ಲಿ ಸೋತಿರುವ ದಕ್ಷಿಣ ಆಫ್ರಿಕ ತಂಡಕ್ಕೆ ಸರಣಿ ಸೋಲು ತಪ್ಪಿಸಲು ಇನ್ನುಳಿದ ಎಲ್ಲ ಪಂದ್ಯಗಳಲ್ಲೂ ಜಯಿಸಬೇಕಾಗಿದೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ದಕ್ಷಿಣ ಆಫ್ರಿಕ ತಂಡಕ್ಕೆ ಗೆಲುವು ಅಷ್ಟೊಂದು ಸುಲಭವಲ್ಲ. 2011ರಲ್ಲಿ ಭಾರತ ಸರಣಿ ಗೆಲುವಿನ ಸಮೀಪ ತಲುಪಿತ್ತು. ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಭಾರತ ತಂಡ ಆರಂಭದಲ್ಲಿ 2-1 ಮುನ್ನಡೆ ಸಾಧಿಸಿತ್ತು. ಬಳಿಕ ಸರಣಿ ಗೆಲ್ಲುವಲ್ಲಿ ಎಡವಿತ್ತು. ಸರಣಿಯನ್ನು 2-3 ಅಂತರದಲ್ಲಿ ಕಳೆದುಕೊಂಡಿತ್ತು. 1992-93ರಲ್ಲಿ ದ್ವಿಪಕ್ಷೀಯ ಸರಣಿಯಲ್ಲಿ ಭಾರತ ಮೂರು ಪಂದ್ಯಗಳಲ್ಲಿ ಜಯ ಗಳಿಸಿತ್ತು. ಆಬಳಿಕ ಇದೇ ಮೊದಲ ಬಾರಿ ಹ್ಯಾಟ್ರಿಕ್ ಜಯ ದಾಖಲಿಸಿದೆ. ಭಾರತ 25 ವರ್ಷಗಳ ಬಳಿಕ ಸರಣಿ ಜಯಿಸಿ ಇತಿಹಾಸ ನಿರ್ಮಿಸಲು ಎದುರು ನೋಡುತ್ತಿದೆ. ಒಂದು ವೇಳೆ ಭಾರತ ಸತತ 4 ಪಂದ್ಯಗಳಲ್ಲಿ ಜಯ ಗಳಿಸಿದರೆ ದಕ್ಷಿಣ ಆಫ್ರಿಕ ಸರಣಿ ಸೋಲು ಅನುಭವಿಸುವ ಜೊತೆಗೆ ಐಸಿಸಿ ಏಕದಿನ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನವನ್ನು ಕಳೆದುಕೊಳ್ಳಲಿದೆ. ಭಾರತ ಏಕದಿನ ಕ್ರಿಕೆಟ್‌ನಲ್ಲೂ ನಂ.1 ಸ್ಥಾನವನ್ನು ಭದ್ರಪಡಿಸಿಕೊಳ್ಳಲಿದೆ.

 ನಾಯಕ ವಿರಾಟ್ ಕೊಹ್ಲಿ ಕಳೆದ ಪಂದ್ಯದಲ್ಲಿ 34ನೇ ಶತಕ ದಾಖಲಿಸಿದ್ದರು. ಈ ಗೆಲುವಿನ ಬಳಿಕ ‘‘ನಾಲ್ಕನೇ ಪಂದ್ಯದ ಗೆಲುವಿನೊಂದಿಗೆ ಎರಡು ಪಂದ್ಯಗಳು ಆಡಲು ಬಾಕಿ ಇರುವಾಗಲೇ ಸರಣಿಯನ್ನು 4-0 ಅಂತರದಲ್ಲಿ ವಶಪಡಿಸಿಕೊಳ್ಳಲಿದೆ’’ ಎಂದು ಹೇಳಿದ್ದರು. ಅವಳಿ ಸ್ಪಿನ್ನರ್‌ಗಳಾದ ಕುಲ್‌ದೀಪ್ ಯಾದವ್ ಮತ್ತು ಯಜುವೇಂದ್ರ ಚಹಾಲ್ ಅವರು ಮೂರು ಪಂದ್ಯಗಳಲ್ಲಿ ಆಫ್ರಿಕ ತಂಡದ 28 ವಿಕೆಟ್‌ಗಳಲ್ಲಿ 21 ವಿಕೆಟ್‌ಗಳನ್ನು ಹಂಚಿಕೊಂಡಿದ್ದಾರೆ. ಅವರು ಇದೇ ಪ್ರದರ್ಶನವನ್ನು ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ.

   ಭಾರತದ ಸ್ಪಿನ್ ಅಸ್ತ್ರದ ಮುಂದೆ ಆಫ್ರಿಕದ ಬ್ಯಾಟಿಂಗ್ ಸೊರಗಿದೆ. ನಾಲ್ಕನೇ ಪಂದ್ಯಕ್ಕೆ ಆಫ್ರಿಕ ತಂಡದಲ್ಲಿ ಕೆಲವು ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ. ಗಾಯಗೊಂಡು ಮೂರು ಪಂದ್ಯಗಳಿಂದ ದೂರವಾಗಿದ್ದ ಸ್ಟಾರ್ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್‌ ಅವರು ನಾಲ್ಕನೇ ಪಂದ್ಯದಲ್ಲಿ ಆಡುವ ನಿರೀಕ್ಷೆ ಇದೆ. ಮೂರನೇ ಟೆಸ್ಟ್ ವೇಳೆ ಕೈ ಬೆರಳಿಗೆ ಆಗಿದ್ದ ಗಾಯದ ಕಾರಣದಿಂದಾಗಿ ಡಿವಿಲಿಯರ್ಸ್‌ ಆರಂಭದ ಮೂರು ಏಕದಿನ ಪಂದ್ಯಗಳಲ್ಲೂ ಆಡಿರಲಿಲ್ಲ.

  ಡಿವಿಲಿಯರ್ಸ್‌ ಅಂತಿಮ ಹನ್ನೊಂದರಲ್ಲಿ ಸೇರಿಕೊಂಡರೆ ನಂ.3 ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಲಿದ್ದಾರೆ. ಜೆ.ಪಿ.ಡುಮಿನಿ ನಂ.4 ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸುವರು. ಡೇವಿಡ್ ಮಿಲ್ಲರ್ ಅಥವಾ ಖಾಯ ರೊಂಡೊ ಅವರು ಅಂತಿಮ ಹನ್ನೊಂದರ ಸ್ಥಾನಕ್ಕಾಗಿ ಪೈಪೋಟಿ ನಡೆಸಲಿದ್ದಾರೆ. ದಕ್ಷಿಣ ಆಫ್ರಿಕ ಹಿನ್ನಡೆ ಅನುಭವಿಸಿದ್ದರೂ, ಏಡೆನ್ ಮರ್ಕರಮ್ ಹಂಗಾಮಿ ನಾಯಕರಾಗಿ ತಂಡವನ್ನು ಮುನ್ನಡೆಸಲಿದ್ದಾರೆ.

 ನಾಲ್ಕನೇ ಪಂದ್ಯ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿದೆ. ಯಾಕೆಂದರೆ ಇದು ‘ಪಿಂಕಿ ಏಕದಿನ ಪಂದ್ಯ.ಸ್ತನ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಲು ಮತ್ತು ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿರುವವರಿಗೆ ನೆರವು ನೀಡಲು ಈ ಪಂದ್ಯವನ್ನು ಆಡಲಾಗುತ್ತಿದೆ. 2011ರಲ್ಲಿ ಮೊದಲ ಬಾರಿ ಇಂತಹ ಏಕದಿನ ಪಂದ್ಯ ನಡೆದಿತ್ತು. ಇದೀಗ 6ನೇ ಬಾರಿ ಈ ಉದ್ದೇಶಕ್ಕಾಗಿ ಏಕದಿನ ಪಂದ್ಯ ನಡೆಯಲಿದೆ.

 ದಕ್ಷಿಣ ಆಫ್ರಿಕ ಈ ತನಕ ಪಿಂಕಿ ‘ಒಡಿಐ’ನಲ್ಲಿ ಸೋಲು ಅನುಭವಿಸಿಲ್ಲ. ಆಟಗಾರರು ಪಿಂಕಿ ಜರ್ಸಿ ಧರಿಸಿ ಕಣಕ್ಕಿಳಿಯಲಿದ್ದಾರೆ.

 ಪಿಂಕಿ ಏಕದಿನ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್‌ ಉತ್ತಮ ರನ್ ದಾಖಲೆ ಹೊಂದಿದ್ದಾರೆ. ಅವರು 2015ರಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ 44 ಎಸೆತಗಳಲ್ಲಿ 149 ರನ್ ಸಿಡಿಸಿದ್ದರು. 2013ರಲ್ಲಿ ಭಾರತದ ವಿರುದ್ಧ ಡಿವಿಲಿಯರ್ಸ್‌ 47 ಎಸೆತಗಳಲ್ಲಿ 77 ರನ್ ಗಳಿಸಿದ್ದರು. ಆಗ ದಕ್ಷಿಣ ಆಫ್ರಿಕ ತಂಡ 4 ವಿಕೆಟ್ ನಷ್ಟದಲ್ಲಿ 358 ರನ್ ಗಳಿಸಿತ್ತು. ಭಾರತ 141 ರನ್‌ಗಳ ಸೋಲು ಅನುಭವಿಸಿತ್ತು. ರೋಹಿತ್ ಶರ್ಮ ಅವರು ಡೇಲ್ ಸ್ಟೇಯ್ನಿ ಮತ್ತು ಮೊರ್ನೆ ಮೊರ್ಕೆಲ್ ದಾಳಿಯನ್ನು ಎದುರಿಸಲಾರದೆ 43 ಎಸೆತಗಳಲ್ಲಿ 18 ರನ್ ಗಳಿಸಿದ್ದರು.

 ದಕ್ಷಿಣ ಆಫ್ರಿಕದ ವಿರುದ್ಧ ರೋಹಿತ್ ಶರ್ಮ ಸಾಧನೆ ತೃಪ್ತಿಕರವಾಗಿಲ್ಲ. 11 ಪಂದ್ಯಗಳಲ್ಲಿ ಅವರು 12.10 ಸರಾಸರಿ ರನ್ ದಾಖಲಿಸಿದ್ದಾರೆ. ರೋಹಿತ್ ಶರ್ಮ ಫಾರ್ಮ್ ಕಳೆದುಕೊಂಡಿದ್ದರೂ ಮುಂದಿನ ಪಂದ್ಯದಲ್ಲೂ ಆಡುವುದನ್ನು ನಿರೀಕ್ಷಿಸಲಾಗಿದೆ. ನಾಲ್ಕನೇ ಪಂದ್ಯದಲ್ಲಿ ಟೀಮ್ ಇಂಡಿಯಾದಲ್ಲಿ ಯಾವುದೇ ಬದಲಾವಣೆ ಸಾಧ್ಯತೆ ಇಲ್ಲ.

  ಈ ಕ್ರೀಡಾಂಗಣದಲ್ಲಿ ಭಾರತದ ದಾಖಲೆ ತೃಪ್ತಿಕರವಾಗಿಲ್ಲ. ಆಡಿರುವ 7 ಪಂದ್ಯಗಳ ಪೈಕಿ 3ರಲ್ಲಿ ಜಯ ಗಳಿಸಿ, ನಾಲ್ಕರಲ್ಲಿ ಸೋಲು ಅನುಭವಿಸಿದೆ. 2003ರಲ್ಲಿ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಸೋಲು ಅನುಭವಿಸಿತ್ತು. ಜನವರಿ 2011ರಲ್ಲಿ ಮುನಾಫ್ ಪಟೇಲ್ 29ಕ್ಕೆ 4 ವಿಕೆಟ್ ಉಡಾಯಿಸಿ ದಕ್ಷಿಣ ಆಫ್ರಿಕ ವಿರುದ್ಧ ಭಾರತ 1 ರನ್ ಅಂತರದಲ್ಲಿ ರೋಚಕ ಗೆಲುವು ಸಾಧಿಸಲು ನೆರವಾಗಿದ್ದರು.

ನಿಮಗೆ ಗೊತ್ತೇ?

►ಭಾರತದ ಸ್ಪಿನ್ನರ್‌ಗಳಾದ ಕುಲ್‌ದೀಪ್ ಯಾದವ್ ಮತ್ತು ಯಜುವೇಂದ್ರ ಚಹಾಲ್ ಮೂರು ಪಂದ್ಯಗಳಲ್ಲಿ ಉರುಳಿದ್ದ ಆಫ್ರಿಕದ 28 ವಿಕೆಟ್‌ಗಳ ಪೈಕಿ 21 ವಿಕೆಟ್‌ಗಳನ್ನು ಹಂಚಿಕೊಂಡಿದ್ದಾರೆ.

►ನಾಯಕ ಕೊಹ್ಲಿ ಕಳೆದ 6 ಏಕದಿನ ಪಂದ್ಯಗಳಲ್ಲಿ 4 ಶತಕ ಸಿಡಿಸಿದ್ದಾರೆ. ಸೆಂಚೂರಿಯನ್‌ನಲ್ಲಿ ಔಟಾಗದೆ 46 ರನ್ ಗಳಿಸಿದ್ದಾರೆ.

►ಎಬಿ ಡಿವಿಲಿಯರ್ಸ್‌ 5 ‘ಪಿಂಕಿ ಒಡಿಐ ’ ಪಂದ್ಯಗಳಲ್ಲಿ 450 ರನ್ ದಾಖಲಿಸಿದ್ದಾರೆ. ಗರಿಷ್ಠ ವೈಯಕ್ತಿಕ ಸ್ಕೋರ್ ವಿಂಡೀಸ್ ವಿರುದ್ಧ 44 ಎಸೆತಗಳಲ್ಲಿ 149 ರನ್.

►ಶಿಖರ್ ಧವನ್ 100ನೇ ಏಕದಿನ ಪಂದ್ಯವನ್ನಾಡಲಿದ್ದಾರೆ. ಅವರು 99 ಏಕದಿನ ಪಂದ್ಯಗಳಲ್ಲಿ 4,200 ರನ್ ಕಲೆ ಹಾಕಿದ್ದಾರೆ.

ಬಾರತ

ವಿರಾಟ್ ಕೊಹ್ಲಿ(ನಾಯಕ), ಶಿಖರ್ ಧವನ್, ರೋಹಿತ್ ಶರ್ಮ, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ದಿನೇಶ್ ಕಾರ್ತಿಕ್, ಕೇದಾರ್ ಜಾಧವ್, ಎಂ.ಎಸ್.ಧೋನಿ(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಯಜುವೇಂದ್ರ ಚಹಾಲ್, ಕುಲ್‌ದೀಪ್ ಯಾದವ್, ಅಕ್ಷರ್ ಪಟೇಲ್, ಭುವನೇಶ್ವರ ಕುಮಾರ್, ಜಸ್‌ಪ್ರೀತ್ ಬುಮ್ರಾ, ಮುಹಮ್ಮದ್ ಶಮಿ, ಶಾರ್ದುಲ್ ಠಾಕೂರ್.

ದಕ್ಷಿಣ.ಆಫ್ರಿಕ

 ಏಡೆನ್ ಮರ್ಕರಮ್(ಹಂಗಾಮಿ ನಾಯಕ), ಹಾಶಿಮ್ ಅಮ್ಲ, ಕ್ವಿಂಟನ್ ಡಿ ಕಾಕ್(ವಿಕೆಟ್ ಕೀಪರ್), ಎಬಿಡಿವಿಲಿಯರ್ಸ್‌ , ಜೆ.ಪಿ.ಡುಮಿನಿ, ಇಮ್ರಾನ್ ತಾಹಿರ್, ಡೇವಿಡ್ ಮಿಲ್ಲರ್, ಮೊರ್ನೆ ಮೊರ್ಕೆಲ್, ಕ್ರಿಸ್ ಮೋರಿಸ್, ಲುಂಗಿಸಾನಿ ಗಿಡಿ, ಆ್ಯಂಡ್ಲೆ ಫೆಹ್ಲುಕ್ವಾಯೊ, ಕಾಗಿಸೊ ರಬಾಡ, ತಾಬ್ರೈದ್ ಶಂಸಿ, ಹೆನ್ರಿಕ್ ಕ್ಲಾಸೆನ್, ಖಯೆಲಿಹಿಲ್ಲೆ ರೊಂಡೊ

ಪಂದ್ಯದ ಸಮಯ: ಸಂಜೆ 4:30 ಗಂಟೆಗೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News