ಐಸಿಸಿ ನೀತಿ ಸಂಹಿತೆ ಉಲ್ಲಂಘನೆ: ರಬಾಡಗೆ ದಂಡ

Update: 2018-02-14 18:29 GMT

ದುಬೈ, ಫೆ.14: ಭಾರತ ವಿರುದ್ಧ ಪೋರ್ಟ್ ಎಲಿಝಬೆತ್‌ನಲ್ಲಿ ಮಂಗಳವಾರ ನಡೆದ ಐದನೇ ಏಕದಿನ ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರ ಶಿಖರ್ ಧವನ್‌ಗೆ ‘ಆಕ್ರೋಶದ ಸನ್ನೆ’ ಮಾಡಿ ಐಸಿಸಿ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವ ದಕ್ಷಿಣ ಆಫ್ರಿಕದ ವೇಗದ ಬೌಲರ್ ಕಾಗಿಸೊ ರಬಾಡಗೆ ಪಂದ್ಯ ಶುಲ್ಕದಲ್ಲಿ 15 ಶೇ. ದಂಡ ಹಾಗೂ ಡಿಮೆರಿಟ್ ಅಂಕವನ್ನು ನೀಡಲಾಗಿದೆ.

ಭಾರತ ಇನಿಂಗ್ಸ್‌ನ 8ನೇ ಓವರ್‌ನಲ್ಲಿ ಈ ಘಟನೆ ನಡೆದಿದೆ. ರಬಾಡ, ಧವನ್‌ರನ್ನು ಔಟ್ ಮಾಡಿದರು. ಪೆವಿಲಿಯನ್‌ನತ್ತ ಹೆಜ್ಜೆ ಇಟ್ಟ ಧವನ್‌ರತ್ತ ಕೈ ಬೀಸಿದ ರಬಾಡ, ಅಸಭ್ಯವಾಗಿ ವರ್ತಿಸಿದರು. ‘‘ಐಸಿಸಿ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವ ರಬಾಡ ಒಂದು ಡಿಮೆರಿಟ್ ಪಾಯಿಂಟ್ ಪಡೆದಿದ್ದಾರೆ’’ ಎಂದು ಐಸಿಸಿ ತಿಳಿಸಿದೆ.

ಆನ್‌ಫೀಲ್ಡ್ ಅಂಪೈರ್‌ಗಳಾದ ಇಯಾನ್ ಗೌಲ್ಡ್ ಹಾಗೂ ಶಾನ್ ಜಾರ್ಜ್, ಮೂರನೇ ಅಂಪೈರ್ ಅಲೀಮ್ ದರ್ ಹಾಗೂ ನಾಲ್ಕನೇ ಅಂಪೈರ್ ಬಾಂಗಾನಿ ಜೆಲೆ ಆರ್ಟಿಕಲ್ 2.1.7ರ ಅಡಿ ದೂರು ದಾಖಲಿಸಿದ್ದರು.

ರಬಾಡ ಐಸಿಸಿ ಮ್ಯಾಚ್ ರೆಫರಿ ಆ್ಯಂಡಿ ಫೈಕ್ರಾಫ್ಟ್ ಬಳಿ ತಪ್ಪೊಪ್ಪಿಕೊಂಡಿದ್ದಾರೆ. ಹಾಗಾಗಿ ಅವರನ್ನು ಅಧಿಕೃತವಾಗಿ ತನಿಖೆಗೆ ಒಳಪಡಿಸಲಾಗಿಲ್ಲ.

‘‘ಒಂದು ವೇಳೆ ರಬಾಡ ಮುಂದಿನ 24 ತಿಂಗಳ ಅವಧಿಯಲ್ಲಿ 8ಕ್ಕಿಂತ ಹೆಚ್ಚು ಡಿಮೆರಿಟ್ ಪಾಯಿಂಟ್ಸ್ ಗಳನ್ನು ಪಡೆದರೆ ಎರಡು ಟೆಸ್ಟ್; ಒಂದು ಟೆಸ್ಟ್ ಹಾಗೂ 2 ಏಕದಿನ/ಟ್ವೆಂಟಿ-20 ಅಥವಾ ನಾಲ್ಕು ಏಕದಿನ/ಟ್ವೆಂಟಿ-20 ಪಂದ್ಯಗಳಿಂದ ಅಮಾನತುಗೊಳ್ಳಲಿದ್ದಾರೆ’’ ಎಂದು ಐಸಿಸಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News