ಪ್ರಧಾನಿ ಮೋದಿ ಸಲಹೆಯಂತೆ ಪಳನಿಸ್ವಾಮಿ ಬಣದೊಂದಿಗೆ ವಿಲೀನಗೊಂಡಿದ್ದೆ: ಪನ್ನೀರ್ ಸೆಲ್ವಂ

Update: 2018-02-17 13:37 GMT

ಚೆನೈ,ಫೆ.17: ಪ್ರಧಾನಿ ನರೇಂದ್ರ ಮೋದಿಯವರ ಸಲಹೆಯಂತೆ ತಾನು ಕಳೆದ ವರ್ಷ ಎಐಎಡಿಎಂಕೆಯ ತನ್ನ ಬಣವನ್ನು ಮುಖ್ಯಮಂತ್ರಿ ಇ.ಕೆ.ಪಳನಿಸ್ವಾಮಿಯವರ ಬಣದೊಂದಿಗೆ ವಿಲೀನಗೊಳಿಸಿದ್ದೆ ಎಂದು ತಮಿಳುನಾಡು ಉಪಮುಖ್ಯಮಂತ್ರಿ ಒ. ಪನ್ನೀರ್ ಸೆಲ್ವಂ ಬಹಿರಂಗಗೊಳಿಸಿದ್ದಾರೆ.

ಶುಕ್ರವಾರ ಥೇನಿಯಲ್ಲಿ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡುತ್ತಿದ್ದ ಎಐಎಡಿಎಂಕೆ ಸಂಚಾಲಕರೂ ಆಗಿರುವ ಪನ್ನೀರ್ ಸೆಲ್ವಂ ಅವರು, ಕಳೆದ ವರ್ಷ ದಿಲ್ಲಿಯಲ್ಲಿ ಮೋದಿಯವರೊಂದಿಗೆ ಸೌಹಾರ್ದ ಭೇಟಿ ಸಂದರ್ಭದಲ್ಲಿ ಈ ವಿಷಯ ಪ್ರಸ್ತಾಪ ಗೊಂಡಿತ್ತು. ಪಕ್ಷವನ್ನು ಉಳಿಸಲು ಪಳನಿಸ್ವಾಮಿ ಬಣದೊಂದಿಗೆ ವಿಲೀನಗೊಳ್ಳುವಂತೆ ಅವರು ಸಲಹೆ ನೀಡಿದ್ದರು ಎಂದು ತಿಳಿಸಿದರು. ಎಐಎಡಿಎಂಕೆಯ ಉಭಯ ಬಣಗಳು 2017,ಆಗಸ್ಟ್‌ನಲ್ಲಿ ವಿಲೀನಗೊಂಡಿದ್ದವು.

ತನಗೆ ಸಚಿವ ಸ್ಥಾನ ಬೇಕಾಗಿಲ್ಲ, ಪಕ್ಷದ ಹುದ್ದೆ ನೀಡಿದರೆ ಸಾಕು ಎಂದು ತಾನು ಮೋದಿಯವರಿಗೆ ತಿಳಿಸಿದ್ದೆ. ಆದರೆ ತಾನು ಪಳನಿಸ್ವಾಮಿ ನೇತೃತ್ವದ ಸಂಪುಟವನ್ನು ಸೇರಬೇಕು ಎಂದು ಅವರು ಬಯಸಿದ್ದರು. ವಿಲೀನಕ್ಕೆ ಮುನ್ನ ಪಳನಿಸ್ವಾಮಿ ಬಣದಲ್ಲಿದ್ದ ತನ್ನಿಬ್ಬರು ಸಂಪುಟ ಸಹೋದ್ಯೋಗಿಗಳಿಗೆ ತಾನು ಈ ವಿಷಯವನ್ನು ತಿಳಿಸಿದ್ದೆ ಮತ್ತು ಅವರೂ ಸಚಿವ ಸ್ಥಾನವನ್ನು ಒಪ್ಪಿಕೊಳ್ಳುವಂತೆ ತನ್ನನ್ನು ಒತ್ತಾಯಿಸಿದ್ದರು. ಹೀಗಾಗಿ ತಾನಿಂದು ಸಚಿವನಾಗಿದ್ದೇನೆ ಎಂದ ಪನ್ನೀರ್ ಸೆಲ್ವಂ, ತನಗೆ ಸಚಿವನಾಗುವ ಬಯಕೆಯಿರಲಿಲ್ಲ. ಅಮ್ಮಾ(ಜಯಲಲಿತಾ) ತನ್ನನ್ನು ನಾಲ್ಕು ಬಾರಿ ಶಾಸಕನನ್ನಾಗಿ ಮತ್ತು ಎರಡು ಬಾರಿ ಮುಖ್ಯಮಂತ್ರಿಯನ್ನಾಗಿ ಮಾಡಿದ್ದರು. ಆ ಗೌರವವೇ ತನಗೆ ಸಾಕು ಎಂದರು.

ಜಯಯಲಿತಾರ ಆಪ್ತಸ್ನೇಹಿತೆ ವಿ.ಕೆ.ಶಶಿಕಲಾ ಮತ್ತು ಅವರ ಕುಟುಂಬದವರು 2016ರ ಚುನಾವಣೆಯಲ್ಲಿ ತನ್ನನ್ನು ಸೋಲಿಸಲು ಪ್ರಯತ್ನಿಸಿದ್ದರು. ತನ್ನಷ್ಟು ಸಂಕಷ್ಟಗಳು ಮತ್ತು ಸಮಸ್ಯೆಗಳನ್ನು ಬೇರೆ ಯಾರಾದರೂ ಅನುಭವಿಸಿದ್ದಿದ್ದರೆ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು ಅಥವಾ ಪಕ್ಷವನ್ನು ತೊರೆಯುತ್ತಿದ್ದರು. ಆದರೆ ಅಮ್ಮನಿಗಾಗಿ ಎಲ್ಲವನ್ನೂ ಸಹಿಸಿಕೊಂಡಿದ್ದೆ ಎಂದರು.

ತನ್ಮಧ್ಯೆ, ಮೋದಿಯವರು ಪಕ್ಷದ ಎರಡೂ ಬಣಗಳ ವಿಲೀನಕ್ಕೆ ಸಲಹೆ ನೀಡಿದ್ದರು ಎಂಬ ಪನ್ನೀರ್ ಸೆಲ್ವಂ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಹಿರಿಯ ಎಐಎಡಿಎಂಕೆ ನಾಯಕ ಹಾಗೂ ಮೀನುಗಾರಿಕೆ ಸಚಿವ ಡಿ.ಜಯಕುಮಾರ್ ಅವರು, ಇಬ್ಬರ ನಡುವೆ ನೇರ ಮಾತುಕತೆ ಸಂದರ್ಭ ಅವರು ಈ ಹೇಳಿಕೆಯನ್ನು ನೀಡಬಹುದಿತ್ತು ಎಂದರು. ಆದರೆ, ಎಐಎಡಿಎಂಕೆಯ ಹಿತರಕ್ಷಣೆಗಾಗಿ ಯಾರೇ ಸಲಹೆ ನೀಡಿದರೂ ಪಕ್ಷವು ಅದನ್ನು ಸ್ವಾಗತಿಸುತ್ತದೆ ಎಂದರು.

ಈ ಬೆಳವಣಿಗೆಗೆ ಪ್ರತಿಕ್ರಿಯಿಸಲು ಬಿಜೆಪಿಯ ರಾಜ್ಯ ಘಟಕವೂ ನಿರಾಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News