ಕಾಂಗ್ರೆಸ್ ಶಾಸಕನ ಹುಡುಕಿಕೊಟ್ಟವರಿಗೆ ಬಹುಮಾನ ಘೋಷಣೆ !

Update: 2018-02-17 13:39 GMT

ಭೋಪಾಲ್, ಫೆ.17: ಸಮನ್ಸ್ ಜಾರಿ ಮಾಡಿದರೂ ಪೊಲೀಸ್ ಠಾಣೆಗೆ ಹಾಜರಾಗದೆ ನಾಪತ್ತೆಯಾಗಿರುವ ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕನ ಕುರಿತು ಮಾಹಿತಿ ನೀಡಿದವರಿಗೆ 10,000 ರೂ. ಪುರಸ್ಕಾರ ಘೋಷಿಸಲಾಗಿದೆ.

ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಕಾಂಗ್ರೆಸ್ ಶಾಸಕ ಹೇಮಂತ್ ಕತಾರೆ ಫೆ.2ರಿಂದ ನಾಪತ್ತೆಯಾಗಿದ್ದು, ಸಮನ್ಸ್ ಜಾರಿಯಾದರೂ ಪೊಲೀಸರೆದುರು ಹಾಜರಾಗಿಲ್ಲ ಎಂದು ಭೋಪಾಲ್‌ನ ಪೊಲೀಸ್ ಅಧೀಕ್ಷಕ ರಾಹುಲ್ ಕುಮಾರ್ ಲೋಧಾ ತಿಳಿಸಿದ್ದಾರೆ. ಶಾಸಕನ ವಿರುದ್ಧ ವಿದ್ಯಾರ್ಥಿನಿಯೊಬ್ಬಳು ದೂರು ನೀಡಿದ್ದಳು.

ಅಲ್ಲದೆ ದೂರುದಾರರ ಸಹಚರ ಎನ್ನಲಾಗಿರುವ ವಿಕ್ರಮ್‌ಜಿತ್ ಸಿಂಗ್ ಎಂಬಾತನ ಬಗ್ಗೆ ಮಾಹಿತಿ ನೀಡಿದವರಿಗೂ ನಗದು ಪುರಸ್ಕಾರವನ್ನು ಪೊಲೀಸರು ಘೋಷಿಸಿದ್ದಾರೆ.

     ಪ್ರಕರಣದ ವಿವರ: 21ರ ಹರೆಯದ ಪತ್ರಿಕೋದ್ಯಮ ವಿದ್ಯಾರ್ಥಿನಿಯೊಬ್ಬಳು ಹಣ ನೀಡದಿದ್ದರೆ ಅತ್ಯಾಚಾರ ಪ್ರಕರಣ ದಾಖಲಿಸುತ್ತೇನೆ ಎಂದು ಶಾಸಕ ಹೇಮಂತ್ ಕತಾರೆಯನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದಾಳೆ ಎಂಬ ದೂರಿನ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯನ್ನು ಬಂಧಿಸಿದ್ದರು.

  ಆದರೆ ಶಾಸಕ ಹೇಮಂತ್ ತನ್ನನ್ನು ಹಲವು ಬಾರಿ ಅತ್ಯಾಚಾರ ನಡೆಸಿದ್ದಾನೆ ಎಂದು ವಿದ್ಯಾರ್ಥಿನಿ ವಿಚಾರಣೆ ವೇಳೆ ತಿಳಿಸಿದ್ದ ಹಿನ್ನೆಲೆಯಲ್ಲಿ ಫೆ.2ರಂದು ಹೇಮಂತ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಅಲ್ಲದೆ 9 ಸದಸ್ಯರ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ವಿದ್ಯಾರ್ಥಿನಿ ಮತ್ತು ಆಕೆಯ ಸಹಚರ ವಿಕ್ರಮ್‌ಜಿತ್ ಸಿಂಗ್ ಹಣಕ್ಕಾಗಿ ತನ್ನನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಹೇಮಂತ್ ಆರೋಪಿಸಿದ್ದರು.

 ವಿದ್ಯಾರ್ಥಿನಿ ಪ್ರಕರಣವನ್ನು ರಾಜಿಯಲ್ಲಿ ಮುಗಿಸಲು 5 ಲಕ್ಷ ರೂ. ಕೇಳಿದ್ದು ಈ ಮೊತ್ತವನ್ನು ಸಂಗ್ರಹಿಸಲು ಆಗಮಿಸುತ್ತಿದ್ದಾಗ ಆಕೆಯನ್ನು ಬಂಧಿಸಲಾಗಿದೆ. ಇದೀಗ ಆಕೆಗೆ ಜಾಮೀನು ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News