ಒಂಭತ್ತು ಒಪ್ಪಂದಗಳಿಗೆ ಭಾರತ-ಇರಾನ್ ಅಂಕಿತ

Update: 2018-02-17 13:43 GMT

ಹೊಸದಿಲ್ಲಿ,ಫೆ.17: ಪ್ರಧಾನಿ ನರೇಂದ್ರ ಮೋದಿ ಮತ್ತು ಇರಾನ್ ಅಧ್ಯಕ್ಷ ಹಸನ್ ರೂಹಾನಿ ಅವರು ಶನಿವಾರ ಇಲ್ಲಿ ಭದ್ರತೆ, ವ್ಯಾಪಾರ ಮತ್ತು ಶಕ್ತಿಯಂತಹ ಪ್ರಮುಖ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರವನ್ನು ಹೆಚ್ಚಿಸುವ ಕುರಿತು ವ್ಯಾಪಕ ಮಾತುಕತೆಗಳನ್ನು ನಡೆಸಿದರು. ಇದೇ ವೇಳೆ ಇಮ್ಮಡಿ ತೆರಿಗೆ ನಿವಾರಣೆ ಒಪ್ಪಂದ ಸೇರಿದಂತೆ ಒಂಭತ್ತು ಒಪ್ಪಂದಗಳಿಗೆ ಉಭಯ ರಾಷ್ಟ್ರಗಳು ಅಂಕಿತ ಹಾಕಿದವು. ಪ್ರಾದೇಶಿಕ ವಿಷಯಗಳ ಕುರಿತೂ ಉಭಯ ನಾಯಕರು ಚರ್ಚಿಸಿದರು.

ವ್ಯಾಪಾರ ಮತ್ತು ಹೂಡಿಕೆ, ಶಕ್ತಿ, ಸಂಪರ್ಕ, ರಕ್ಷಣೆ ಮತ್ತು ಭದ್ರತೆ ಕ್ಷೇತ್ರಗಳಲ್ಲಿ ಸಹಕಾರದ ಕುರಿತು ಮತ್ತು ಪ್ರಾದೇಶಿಕ ವಿಷಯಗಳ ಬಗ್ಗೆ ಉಭಯ ನಾಯಕರು ವ್ಯಾಪಕ ಮತ್ತು ಫಲಪ್ರದ ಚರ್ಚೆಗಳನ್ನು ನಡೆಸಿದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಅವರು ಟ್ವೀಟಿಸಿದ್ದಾರೆ.

ರೂಹಾನಿ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮೋದಿ ಅವರು, ಸಂಪರ್ಕ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಆಳವಾದ ಸಹಕಾರವನ್ನು ಉಭಯ ರಾಷ್ಟ್ರಗಳು ಬಯಸುತ್ತಿವೆ ಎನ್ನುವುದನ್ನು ಇರಾನ್ ಅಧ್ಯಕ್ಷರ ಭೇಟಿಯು ಸೂಚಿಸುತ್ತಿದೆ ಎಂದರು.

ತಮ್ಮ ನಡುವಿನ ಮಾತುಕತೆಗಳ ವಿವರಗಳನ್ನು ನೀಡಿದ ಮೋದಿ, ಭೀತಿವಾದ, ಮಾದಕ ದ್ರವ್ಯ ಸಾಗಣೆ ಮತ್ತು ಇತರ ಸವಾಲುಗಳು ಒಡ್ಡಿರುವ ಬೆದರಿಕೆಗಳ ಬಗ್ಗೆ ತಾವು ಚರ್ಚಿಸಿದ್ದಾಗಿ ತಿಳಿಸಿದರು.

ಭೀತಿವಾದ ಮತ್ತು ಉಗ್ರವಾದಗಳ ವಿರುದ್ಧ ಹೋರಾಡಲು ತಾವು ದೃಢ ನಿರ್ಧಾರವನ್ನು ಕೈಗೊಂಡಿದ್ದೇವೆ ಎಂದು ಹೇಳಿದ ರೂಹಾನಿ, ಪ್ರಾದೇಶಿಕ ಸಂಘರ್ಷಗಳನ್ನು ರಾಜತಾಂತ್ರಿಕ ಮಾರ್ಗಗಳು ಮತ್ತು ರಾಜಕೀಯ ಉಪಕ್ರಮಗಳ ಮೂಲಕ ಬಗೆಹರಿಸಿಕೊಳ್ಳಬೇಕು ಎಂದರು.

ವ್ಯೂಹಾತ್ಮಕವಾಗಿ ಮಹತ್ವದ್ದಾಗಿರುವ ಚಾಬಹರ್ ಬಂದರನ್ನು ಅಭಿವೃದ್ಧಿಗೊಳಿಸುವಲ್ಲಿ ರೂಹಾನಿಯವರ ನೇತೃತ್ವವನ್ನು ಮೋದಿ ಪ್ರಶಂಸಿಸಿದರು.

ಗಡೀಪಾರು ಒಪ್ಪಂದದ ಸ್ಥಿರೀಕರಣ ಮತ್ತು ವೀಸಾ ಪ್ರಕ್ರಿಯೆಗಳನ್ನು ಸರಳಗೊಳಿಸಲು ಅಗತ್ಯ ಒಡಂಬಡಿಕೆಗಳನ್ನೂ ಉಭಯ ರಾಷ್ಟ್ರಗಳು ಪರಸ್ಪರ ವಿನಿಮಯಿಸಿಕೊಂಡವು.

ಇದಕ್ಕೂ ಮುನ್ನ ರೌಹಾನಿ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಸಾಂಪ್ರದಾಯಿಕ ಸ್ವಾಗತವನ್ನು ಕೋರಲಾಯಿತು. ಬೆಳಿಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ರೂಹಾನಿ ಯವರನ್ನು ಭೇಟಿಯಾಗಿ ವಿವಿಧ ವಿಷಯಗಳ ಕುರಿತು ಚರ್ಚಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News