ನಿರ್ಮಲಾ ಸೀತಾರಾಮನ್ ವಿರುದ್ಧ ಮಾನನಷ್ಟ ಮೊಕದ್ದಮೆ: ಕಾಂಗ್ರೆಸ್ ನಾಯಕ ಸಿಂಘ್ವಿ ಎಚ್ಚರಿಕೆ

Update: 2018-02-17 15:36 GMT

 ಹೊಸದಿಲ್ಲಿ,ಫೆ.17: ಪಂಜಾಬ್ ಆ್ಯಂಡ್ ನ್ಯಾಷನಲ್ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿ ದಂತೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತನ್ನ ವಿರುದ್ಧ ಮಾಡಿರುವ ಆರೋಪಗಳಿಗೆ ಶನಿವಾರ ತಿರುಗೇಟು ನೀಡಿದ ಕಾಂಗ್ರೆಸ್ ನಾಯಕ ಅಭಿಷೇಕ್ ಸಿಂಘ್ವಿ ಅವರು, ಮಾನನಷ್ಟ ಮೊಕದ್ದಮೆಯನ್ನು ದಾಖಲಿಸುವುದಾಗಿ ಬಿಜೆಪಿಗೆ ಎಚ್ಚರಿಕೆ ನೀಡಿದರು.

ಶನಿವಾರ ಬೆಳಿಗ್ಗೆ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ್ದ ಸೀತಾರಾಮನ್ ಅವರು, ಸಿಂಘ್ವಿಯವರ ಪತ್ನಿ ಅನಿತಾ ಸಿಂಘ್ವಿ ಅವರು ಮುಂಬೈನಲ್ಲಿ ನೀರವ್ ಮೋದಿಯ ಜ್ಯುವೆಲ್ಲರಿ ಕಂಪನಿಯೊಂದಿಗೆ ವ್ಯವಹರಿಸುತ್ತಿರುವ ಖಾಸಗಿ ಹೋಲ್ಡಿಂಗ್ ಸಂಸ್ಥೆಯ ನಿರ್ದೇಶಕ ರಲ್ಲೋರ್ವರಾಗಿದ್ದಾರೆ ಎಂದು ಆಪಾದಿಸಿದ್ದರು.

ಇದರ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ ಸಿಂಘ್ವಿ, ತಾನು,ತನ್ನ ಪತ್ನಿ ಮತ್ತು ತನ್ನ ಪುತ್ರರು ಗೀತಾಂಜಲಿ ಜೆಮ್ಸ್ ಅಥವಾ ನೀರವ್ ಮೋದಿಯ ಕಂಪನಿಗಳೊಂದಿಗೆ ಯಾವುದೇ ಸಂಬಂಧಗಳನ್ನು ಹೊಂದಿಲ್ಲ ಎಂದು ತಿಳಿಸಿದರು. ತನ್ನ ವಿರುದ್ಧ ಅವಮಾನಕಾರಿ ಆರೋಪಗಳನ್ನು ಹರಡುತ್ತಿರುವ ಸೀತಾರಾಮನ್ ಮತ್ತು ಅವರ ಸಹೋದ್ಯೋಗಿಗಳ ವಿರುದ್ಧ ಸಿವಿಲ್ ಮತ್ತು ಕ್ರಿಮಿನಲ್ ಮಾನನಷ್ಟ ಪ್ರಕರಣವನ್ನು ದಾಖಲಿಸಲು ತಾನು ಉದ್ದೇಶಿಸಿದ್ದೇನೆ ಎಂದರು. ಈ ಆರೋಪಗಳನ್ನು ಹರಡುತ್ತಿರುವ ಮಾಧ್ಯಮಗಳ ವಿರುದ್ಧವೂ ಪ್ರಕರಣ ದಾಖಲಿಸುವುದಾಗಿ ಅವರು ತಿಳಿಸಿದರು.

  ತನ್ನ ಪತ್ನಿ ಮತ್ತು ಪುತ್ರರು ನಿರ್ದೇಶಕರಾಗಿರುವ ಅದ್ವೈತ್ ಹೋಲ್ಡಿಂಗ್ಸ್‌ನ ಒಡೆತನದಲ್ಲಿರುವ ಮುಂಬೈನ ಪರೇಲ್‌ನ ಕಮಲಾ ಮಿಲ್ಸ್ ಆಸ್ತಿಯಲ್ಲಿ ನೀರವ್ ಮೋದಿಯ ಫೈರ್‌ಸ್ಟೋನ್ ಡೈಮಂಡ್ ಕಂಪನಿಯು ಹಲವಾರು ವರ್ಷಗಳಿಂದ ಬಾಡಿಗೆ ನೆಲೆಯಲ್ಲಿತ್ತು ಮತ್ತು ಅದು ಕಳೆದ ವರ್ಷದ ಡಿಸೆಂಬರ್‌ನಲ್ಲಿ ಮಳಿಗೆಯನ್ನು ತೆರವುಗೊಳಿಸಿದೆ. ಅದ್ವೈತ್‌ಗೆ ಅಥವಾ ತನ್ನ ಕುಟುಂಬಕ್ಕೆ ಮೋದಿ ಅಥವಾ ಫೈರ್‌ಸ್ಟೋನ್‌ನಲ್ಲಿ ಯಾವುದೇ ಹಿತಾಸಕ್ತಿಯಿಲ್ಲ ಎಂದು ಸಿಂಘ್ವಿ ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News