ರಾಜಕೀಯದ ಜೊತೆ ಧರ್ಮ ಬೆರೆಸಬಾರದು : ವೆಂಕಯ್ಯ ನಾಯ್ಡು

Update: 2018-02-17 15:40 GMT

ತಿರುವನಂತಪುರಂ, ಫೆ.17: ಧರ್ಮವು ವೈಯಕ್ತಿಕವಾದುದು ಹಾಗೂ ಪ್ರಾರ್ಥನೆ ಸಲ್ಲಿಸುವ ಒಂದು ಪ್ರಕ್ರಿಯೆಯಾಗಿದೆ . ರಾಜಕೀಯದ ಜೊತೆ ಧರ್ಮವನ್ನು ಸೇರಿಸುವುದು ಸರಿಯಲ್ಲ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ.

ರಾಜಕೀಯದ ಜೊತೆ ಧರ್ಮ ಅಥವಾ ಧರ್ಮದ ಜೊತೆ ರಾಜಕೀಯವನ್ನು ಸೇರಿಸಬಾರದು. ನಾವು ವಸುಧೈವ ಕುಟುಂಬಕಂ ಎಂಬ ಸೂಕ್ತಿಯಲ್ಲಿ ನಂಬಿಕೆ ಇರಿಸಿದ್ದು, ಎಲ್ಲರೂ ಸಮಾನರು ಎಂಬುದು ನಮ್ಮ ದೇಶದ ಮನೋಭಾವವಾಗಿದೆ. ಹೀಗಿರುವಾಗ ವ್ಯಕ್ತಿಯನ್ನು ಧರ್ಮ ಅಥವಾ ಜಾತಿಯ ಆಧಾರದಲ್ಲಿ ಬೇರ್ಪಡಿಸಲು ಹೇಗೆ ಸಾಧ್ಯ ಎಂದು ವೆಂಕಯ್ಯ ನಾಯ್ಡು ಪ್ರಶ್ನಿಸಿದರು. ತಿರುವನಂತಪುರಂನ ಕನಕಕುನ್ನು ಅರಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಶ್ರೀ ಚಿಥಿರ ಥಿರುನಾಳ್ ಸ್ಮಾರಕ ಉಪನ್ಯಾಸ ನೀಡಿ ಮಾತನಾಡಿದರು.

  ಸಾಮಾಜಿಕ ನ್ಯಾಯ ಹಾಗೂ ಒಳಗೊಳ್ಳುವಿಕೆ ಸ್ವತಂತ್ರ ಭಾರತದ ಅವಿಭಾಜ್ಯ ಅಂಶವಾಗಿದೆ. ಜಾತಿಯ ಹೆಸರಿನಲ್ಲಿ ದೇವಸ್ಥಾನಕ್ಕೆ ಪ್ರವೇಶ ನಿರಾಕರಿಸುವುದು ಸರಿಯಾದ ಕ್ರಮವಲ್ಲ . ಸಾಮಾಜಿಕ ಏಕೀಕರಣದಲ್ಲಿ ದಲಿತರಿಗೆ ಇರುವ ಅಡ್ಡಿಯನ್ನು ನಿವಾರಿಸುವುದು ಬಹುದೊಡ್ಡ ಸವಾಲಾಗಿದೆ . ದೇಶದ ವಿವಿಧೆಡೆ ದೇವಸ್ಥಾನಗಳಿಗೆ ಪ್ರವೇಶಕ್ಕೆ ಅವಕಾಶ ನೀಡಬೇಕೆಂದು ಆಗ್ರಹಿಸಿ ದಲಿತರು ಆಂದೋಲನ ನಡೆಸುತ್ತಿದ್ದಾರೆ. ಒಡಿಶಾದ ಜಗನ್ನಾಥ ದೇವಳ ಹಾಗೂ ರಾಜಸ್ತಾನದ ಚಾಮುಂಡಿ ದೇವಳಕ್ಕೆ ಪ್ರವೇಶ ಪಡೆಯಬೇಕಿದ್ದರೆ ದಲಿತರು ಬಲಪ್ರಯೋಗ ನಡೆಸಬೇಕಾಯಿತು. ಈ ರೀತಿ ಜನರನ್ನು ವಿಂಗಡಿಸಿದರೆ ಭಾರತವನ್ನು ಸಮಾನತಾವಾದದ ಆದರ್ಶ ನಾಗರಿಕ ಸಮಾಜ ಎಂದು ಕರೆಯಲು ಸಾಧ್ಯವಿಲ್ಲ ಎಂದವರು ಹೇಳಿದರು.

ಸರ್ವೇ ಜನ ಸುಖಿನೋಭವಂತು ಎಂದು ಹೇಳುವವರು ನಾವು. ಇಡೀ ವಿಶ್ವವೇ ನಮ್ಮ ಕುಟುಂಬ ಎಂದು ಪರಿಗಣಿಸುವವರು. ಸರ್ವರ ಯೋಗಕ್ಷೇಮವನ್ನು ಬಯಸುವವರು. ನಮ್ಮ ಹಿತಚಿಂತನೆಯ ಜೊತೆಗೆ ನೆರೆಹೊರೆಯವರ ಹಿತಚಿಂತನೆಯ ಬಗ್ಗೆ ಕಾಳಜಿ ವಹಿಸುವ ಚಿಂತನೆ ನಮ್ಮದು. ನಮ್ಮ ರಾಷ್ಟ್ರ ಎಂದಿಗೂ ಆಕ್ರಮಣಶೀಲತೆಯನ್ನು ತೋರಿಲ್ಲ. ನಾವಾಗಿಯೇ ಯಾವ ರಾಷ್ಟ್ರದ ಮೇಲೆ ದಾಳಿ ನಡೆಸಿದ ಇತಿಹಾಸವಿಲ್ಲ ಎಂದು ನಾಯ್ಡು ಹೇಳಿದರು.

 ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವಾಗ ನಾಲ್ಕು ‘ಸಿ’ಗಳಿಗೆ ಆದ್ಯತೆ ನೀಡಬೇಕು . ಕ್ಯಾಲಿಬರ್ (ಕ್ಷಮತೆ), ಕ್ಯಾರೆಕ್ಟರ್(ನಡತೆ), ಕೆಪಾಸಿಟಿ(ಅರ್ಹತೆ) ಮತ್ತು ಕಂಡಕ್ಟ್(ವರ್ತನೆ)ಯನ್ನು ಪರಿಗಣಿಸಬೇಕು. ಆದರೆ ದುರದೃಷ್ಟವಶಾತ್, ಕೆಲವು ರಾಜಕೀಯ ಪಕ್ಷಗಳು ಮೂರು ‘ಸಿ’ ಗಳಿಗೆ ಆದ್ಯತೆ ನೀಡುತ್ತಿವೆ. ಕಾಸ್ಟ್ (ಜಾತಿ), ಕಮ್ಯುನಿಟಿ(ಸಮುದಾಯ) ಮತ್ತು ಕ್ಯಾಶ್ (ಹಣ)ಕ್ಕೆ ಆದ್ಯತೆ ನೀಡುತ್ತಿವೆ ಎಂದರು.

   ರಾಜರು ಅಥವಾ ಪ್ರಜಾಪ್ರಭುತ್ವ ವ್ಯವಸ್ಥೆಯ ಆಡಳಿತಗಾರರು ಸದಾ ಎಚ್ಚರದಿಂದ, ಜಾಗೃತೆಯಿಂದ ಇರಬೇಕು ಹಾಗೂ ನೂತನ ವಿಚಾರಧಾರೆಗಳ ಬಗ್ಗೆ ಮುಕ್ತ ಮನಸ್ಸು ಹೊಂದಿರಬೇಕು ಎಂದರು. ಈ ಹಿಂದೆ ತಿರುವಾಂಕೂರನ್ನು ಆಳಿದ್ದ ದೊರೆ ಶ್ರೀ ಛಿತ್ತಿರ ಥಿರುನಾಳ್ ಬಲರಾಮ ವರ್ಮರು ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಸರ್ವಕಾಲಕ್ಕೂ ಪ್ರಸ್ತುತವಾದ ಮಾದರಿಯನ್ನು ಹಾಕಿಕೊಟ್ಟಿದ್ದರು. ಅವರು ಉತ್ತಮ ಆಡಳಿತಗಾರನಾಗಿದ್ದು ಅವರ ಆಡಳಿತ ವೈಖರಿಯಲ್ಲಿ ಭಾರತೀಯತೆಯ ಮೂಲಸ್ವರೂಪ ಅಡಗಿತ್ತು ಎಂದು ನಾಯ್ಡು ಹೇಳಿದರು.

ಕೇರಳದ ರಾಜ್ಯಪಾಲ ನ್ಯಾ. ಪಿ.ಸದಾಶಿವನ್, ರಾಜ್ಯದ ಸಾಂಸ್ಕೃತಿಕ ವ್ಯವಹಾರ ಸಚಿವ ಎ.ಕೆ.ಬಾಲನ್ ಹಾಗೂ ರಾಜಮನೆತನದ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News