ಉತ್ತರ ಪ್ರದೇಶ: ಬಿಜೆಪಿ ಸಂಸದನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು

Update: 2018-02-19 13:41 GMT

ಲಕ್ನೋ, ಫೆ.19: ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಭೂವಿವಾದಕ್ಕೆ ಸಂಬಂಧಿಸಿ ಬಿಜೆಪಿಯ ಸಂಸದ ಕಮಲೇಶ್ ಪಾಸ್ವಾನ್ ಹಾಗೂ ಇತರ 27 ಜನರ ವಿರುದ್ಧ ಹಿಂಸಾಚಾರ ಮತ್ತು ಕ್ರಿಮಿನಲ್ ಕೃತ್ಯಕ್ಕೆ ಪಿತೂರಿ ನಡೆಸಿದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ

    ರುಸ್ತಂಪುರ ಪ್ರದೇಶದಲ್ಲಿ ಇಬ್ಬರು ವ್ಯಕ್ತಿಗಳ ಮಧ್ಯೆ ಜಮೀನಿನ ಗಡಿ ಕುರಿತು ವಿವಾದವಿತ್ತು. ಗಡಿ ಗುರುತಿಗೆ ನಿರ್ಮಿಸಲಾಗುತ್ತಿದ್ದ ಗೋಡೆಯನ್ನು ರವಿವಾರ ಮಧ್ಯಾಹ್ನದ ವೇಳೆ ಇನ್ನೊಂದು ತಂಡ ಕೆಡವಿ ಹಾಕಿದ್ದು ಈ ಕೃತ್ಯಕ್ಕೆ ಸಂಸದ ಕಮಲೇಶ್ ಪಾಸ್ವಾನ್ ಬೆಂಬಲವಿತ್ತು ಎಂದು ವ್ಯಕ್ತಿಯೊಬ್ಬ ದೂರು ದಾಖಲಿಸಿರುವುದಾಗಿ ಕಂಟೋನ್ಮೆಂಟ್ ಪೊಲೀಸ್ ಠಾಣೆಯ ಹೆಚ್ಚುವರಿ ಉಸ್ತುವಾರಿ ವಹಿಸಿರುವ ವೃತ್ತ ನಿರೀಕ್ಷಕ ಪ್ರವೀಣ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

  ಈ ಕೃತ್ಯದಲ್ಲಿ ಪಾಸ್ವಾನ್ ನೇರವಾಗಿ ಭಾಗಿಯಾಗಿಲ್ಲ. ಆದರೆ ಇವರ ವಿರುದ್ಧ ದುಷ್ಕೃತ್ಯ ನಡೆಸಿದವರಿಗೆ ಆಶ್ರಯ ಮತ್ತು ಬೆಂಬಲ ನೀಡಿದ ಆರೋಪ ದಾಖಲಾಗಿದೆ. ಈ ಕುರಿತು ತನಿಖೆ ನಡೆಸಲಾಗುವುದು. ಪಾಸ್ವಾನ್ ಹಾಗೂ ಇತರರ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಪರಿಚ್ಛೇದಗಳಡಿ ಪ್ರಕರಣ ದಾಖಲಾಗಿದೆ. ಪಾಸ್ವಾನ್ ಅವರ ಸಹಚರರು ಗೋಡೆ ಕೆಡವಿರುವ ಬಗ್ಗೆ ಪುರಾವೆ ದೊರೆತಿದೆ ಎಂದು ಸಿಂಗ್ ತಿಳಿಸಿದ್ದಾರೆ.

ಆದರೆ ಆರೋಪವನ್ನು ಪಾಸ್ವಾನ್ ನಿರಾಕರಿಸಿದ್ದಾರೆ. ಘಟನೆ ನಡೆದಾಗ ತಾನು ಸ್ಥಳದಲ್ಲಿ ಇರಲಿಲ್ಲ ಮತ್ತು ಇದರಲ್ಲಿ ತನ್ನ ಪಾತ್ರವಿಲ್ಲ. ಈ ಕುರಿತು ಪೊಲೀಸರಿಗೆ ತಿಳಿಸಿದ್ದೇನೆ. ಎಫ್‌ಐಆರ್‌ನಲ್ಲಿ ತನ್ನ ಹೆಸರು ಇದೆ ಎಂದು ತಿಳಿದಾಗ ಆಘಾತವಾಯಿತು ಎಂದು ಪಾಸ್ವಾನ್ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News