ಇಎಸ್‌ಪಿಎನ್ ಪ್ರಶಸ್ತಿ: ಕೌರ್, ಯಾದವ್,ಚಹಾಲ್‌ಗೆ ಗೌರವ

Update: 2018-02-19 18:23 GMT

ಹೊಸದಿಲ್ಲಿ, ಫೆ.19: ಭಾರತದ ಕ್ರಿಕೆಟ್ ಆಟಗಾರ್ತಿ ಹರ್ಮನ್‌ಪ್ರೀತ್ ಕೌರ್, ಅವಳಿ ಸ್ಪಿನ್ನರ್‌ಗಳಾದ ಕುಲ್‌ದೀಪ್ ಯಾದವ್ ಹಾಗೂ ಯಜುವೇಂದ್ರ ಚಹಾಲ್ 2017ರ ಸಾಲಿನಲ್ಲಿ ಕ್ರಿಕೆಟ್‌ನಲ್ಲಿ ನೀಡಿರುವ ಶ್ರೇಷ್ಠ ಪ್ರದರ್ಶನಕ್ಕೆ ನೀಡಲ್ಪಡುವ ಇಎಸ್‌ಪಿಎನ್ ಕ್ರಿಕ್‌ಇನ್‌ಫೋ ಅವಾರ್ಡ್ಸ್‌ಗೆ ಭಾಜನರಾಗಿದ್ದ್ದಾರೆ.

ಒಟ್ಟು 12 ಪ್ರಶಸ್ತಿಗಳ ಪೈಕಿ ಭಾರತದ ಆಟಗಾರರು ಮೂರು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ.

           ಕುಲ್‌ದೀಪ್ ಯಾದವ್

  2017ರ ಮಹಿಳೆಯರ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಜೀವನಶ್ರೇಷ್ಠ 171 ರನ್ ಗಳಿಸಿದ್ದ ಕೌರ್ ವರ್ಷದ ಬ್ಯಾಟ್ಸ್‌ವುಮೆನ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಯಾದವ್ ಹಾಗೂ ಚಹಾಲ್ ಕ್ರಮವಾಗಿ ವರ್ಷದ ಉದಯೋನ್ಮುಖ ಆಟಗಾರ ಹಾಗೂ ವರ್ಷದ ಟ್ವೆಂಟಿ-20 ಬೌಲರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಯಾದವ್ ಧರ್ಮಶಾಲಾ ಟೆಸ್ಟ್‌ನಲ್ಲಿ ಆಸ್ಟ್ರೇಲಿಯದ ಡೇವಿಡ್ ವಾರ್ನರ್ ವಿಕೆಟ್ ಉಡಾಯಿಸುವ ಮೂಲಕ ಚೊಚ್ಚಲ ವಿಕೆಟ್ ಪಡೆದಿದ್ದಾರೆ. 2017ರ ಸಾಲಿನಲ್ಲಿ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಒಟ್ಟು 43 ವಿಕೆಟ್‌ಗಳನ್ನು ಪಡೆದಿರುವ ಯಾದವ್ ಪಾಕಿಸ್ತಾನ ಲೆಗ್-ಸ್ಪಿನ್ನರ್ ಶಾದಾಬ್ ಖಾನ್‌ರನ್ನು (34 ವಿಕೆಟ್) ಸ್ಪರ್ಧೆಯಲ್ಲಿ ಹಿಂದಿಕ್ಕಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಸ್ತುತ ಯಾದವ್ ಭಾರತ ಬೌಲಿಂಗ್ ವಿಭಾಗದಲ್ಲಿ ಪ್ರಮುಖ ಅಸ್ತ್ರವಾಗಿದ್ದಾರೆ.

                       ಹರ್ಮನ್‌ಪ್ರೀತ್ ಕೌರ್

ಚಹಾಲ್ ಬೆಂಗಳೂರಿನಲ್ಲಿ ಇಂಗ್ಲೆಂಡ್ ವಿರುದ್ಧದ 3ನೇ ಟ್ವೆಂಟಿ-20 ಪಂದ್ಯದಲ್ಲಿ 25 ರನ್‌ಗೆ 6 ವಿಕೆಟ್ ಕಬಳಿಸಿ ಗಮನ ಸೆಳೆದಿದ್ದರು.

ವರ್ಷದ ನಾಯಕತ್ವ ಪ್ರಶಸ್ತಿಯು ಇದೇ ಮೊದಲ ಬಾರಿ ಮಹಿಳಾ ಆಟಗಾರ್ತಿಯ ಪಾಲಾಗಿದೆ. ಇಂಗ್ಲೆಂಡ್ ಮಹಿಳಾ ತಂಡದ ನಾಯಕಿ ಹೀದರ್ ನೈಟ್ ಅವರು ಸ್ಮಿತ್, ವಿರಾಟ್ ಕೊಹ್ಲಿ ಹಾಗೂ ಸರ್ಫರಾಝ್ ಅಹ್ಮದ್‌ರನ್ನು ಸ್ಪರ್ಧೆಯಲ್ಲಿ ಹಿಂದಿಕ್ಕಿ ವರ್ಷದ ನಾಯಕಿ ಪ್ರಶಸ್ತಿ ಪಡೆದರು. ನೈಟ್ ನೇತೃತ್ವದ ಇಂಗ್ಲೆಂಡ್ ತಂಡ 2017ರಲ್ಲಿ 15 ಪಂದ್ಯಗಳಲ್ಲಿ 11ರಲ್ಲಿ ಜಯ ಸಾಧಿಸಿದ್ದಲ್ಲದೆ ತಂಡ ವಿಶ್ವಕಪ್ ಜಯಿಸಲು ನೆರವಾಗಿದ್ದರು. ಆಸ್ಟ್ರೇಲಿಯದ ನಾಯಕ ಸ್ಟೀವನ್ ಸ್ಮಿತ್ ಶ್ರೇಷ್ಠ ಟೆಸ್ಟ್ ಬ್ಯಾಟ್ಸ್‌ಮನ್ ಗೌರವಕ್ಕೆ ಪಾತ್ರರಾದರು. ಸ್ಮಿತ್ ಭಾರತ ವಿರುದ್ಧ ಪುಣೆ ಟೆಸ್ಟ್‌ನಲ್ಲಿ 109 ರನ್ ಗಳಿಸಿ ತಂಡಕ್ಕೆ ಅನಿರೀಕ್ಷಿತ ಗೆಲುವು ತಂದಿದ್ದರು. ಸ್ಮಿತ್‌ರ ಸಹ ಆಟಗಾರ ನಥಾನ್ ಲಿಯೊನ್ ಭಾರತದ ಆರ್.ಅಶ್ವಿನ್‌ರನ್ನು(6-41)ಸ್ಪರ್ಧೆಯಲ್ಲಿ ಹಿಂದಿಕ್ಕಿ ವರ್ಷದ ಟೆಸ್ಟ್ ಬೌಲರ್ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದಾರೆ. ಆಸ್ಟ್ರೇಲಿಯದ ಲಿಯೊನ್ ಬೆಂಗಳೂರಿನಲ್ಲಿ ನಡೆದ 2ನೇ ಟೆಸ್ಟ್‌ನಲ್ಲಿ ಭಾರತ ವಿರುದ್ಧ 50 ರನ್‌ಗೆ 8 ವಿಕೆಟ್‌ಗಳನ್ನು ಪಡೆದಿದ್ದರು.

  ವರ್ಷದ ಶ್ರೇಷ್ಠ ಏಕದಿನ ಬ್ಯಾಟ್ಸ್‌ಮನ್ ಹಾಗೂ ಬೌಲರ್ ಪ್ರಶಸ್ತಿ ಪಾಕಿಸ್ತಾನದ ಝಮಾನ್(ಅಜೇಯ 114) ಹಾಗೂ ಮುಹಮ್ಮದ್ ಆಮಿರ್(3-16) ಪಾಲಾಗಿದೆ. ಝಮಾನ್ ಹಾಗೂ ಆಮಿರ್ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿ ಪಾಕ್‌ಗೆ ಪ್ರಶಸ್ತಿ ಗೆದ್ದುಕೊಟ್ಟಿದ್ದರು. ಆಮಿರ್ 16 ರನ್‌ಗೆ 3 ವಿಕೆಟ್ ಪಡೆದಿದ್ದರು. ಅದೇ ಪಂದ್ಯದಲ್ಲಿ 114 ರನ್ ಗಳಿಸಿದ ಝಮಾನ್ ಪಾಕ್ ತಂಡ 8 ವರ್ಷಗಳ ಬಳಿಕ ಐಸಿಸಿ ಟೂರ್ನಿಯಲ್ಲಿ ಭಾರತವನ್ನು ಮಣಿಸಲು ನೆರವಾಗಿದ್ದರು. ಈ ಇಬ್ಬರು ರೋಹಿತ್ ಶರ್ಮ ಹಾಗೂ ರಶೀದ್ ಖಾನ್‌ರನ್ನು ಸ್ಪರ್ಧೆಯಲ್ಲಿ ಹಿಂದಿಕ್ಕಿ ಪ್ರಶಸ್ತಿ ಜಯಿಸಿದರು.

ಟ್ವೆಂಟಿ-20 ಬ್ಯಾಟಿಂಗ್ ಪ್ರಶಸ್ತಿಯನ್ನು ವೆಸ್ಟ್‌ಇಂಡೀಸ್‌ನಎವಿನ್ ಲೂಯಿಸ್ ಗೆದ್ದುಕೊಂಡಿದ್ದಾರೆ. ಲೂಯಿಸ್ ಔಟಾಗದೆ 125 ರನ್ ಗಳಿಸಿದ್ದು, ಭಾರತ ವಿರುದ್ಧ ಕಿಂಗ್ಸ್‌ಸ್ಟನ್‌ನಲ್ಲಿ ಟ್ವೆಂಟಿ-20 ಸ್ಕೋರ್ ಚೇಸಿಂಗ್ ವೇಳೆ ಈ ಸಾಧನೆ ಮಾಡಿದ್ದರು. ಅಸೋಸಿಯೇಟ್ ಬ್ಯಾಟಿಂಗ್ ಪ್ರಶಸ್ತಿ ಸ್ಕಾಟ್ಲೆಂಡ್‌ನ ಕೈಲ್ ಕೊಟ್ಝೆರ್ ಗೆದ್ದುಕೊಂಡಿದ್ದಾರೆ. 11ನೇ ಆವೃತ್ತಿಯ ಇಎಸ್‌ಪಿಎನ್ ಪ್ರಶಸ್ತಿಗಳನ್ನು ಮಾಜಿ ಆಟಗಾರರಾದ ಇಯಾನ್ ಚಾಪೆಲ್, ಕರ್ಟ್ನಿ ವಾಲ್ಶ್, ರಮೀಝ್ ರಾಜಾ, ಡರಿಲ್ ಕಲಿನನ್, ಅಜಿತ್ ಅಗರ್ಕರ್, ಮಾರ್ಕ್ ನಿಕೊಲಸ್ ಹಾಗೂ ಮಾಜಿ ಅಂಪೈರ್ ಸೈಮನ್‌ಟಫೆಲ್ ಸಹಿತ 18 ಸದಸ್ಯರ ಸ್ವತಂತ್ರ ಜ್ಯೂರಿ ತಂಡ ಆಯ್ಕೆ ಪ್ರಶಸ್ತಿ ಆಯ್ಕೆ ಮಾಡಿದೆ.

►ಶ್ರೇಷ್ಠ ಟೆಸ್ಟ್ ದಾಂಡಿಗ: ಸ್ಟೀವನ್ ಸ್ಮಿತ್

►ಶ್ರೇಷ್ಠ ಟೆಸ್ಟ್ ಬೌಲರ್: ನಥಾನ್ ಲಿಯೊನ್

►ಶ್ರೇಷ್ಠ ಏಕದಿನ ಬ್ಯಾಟ್ಸ್‌ಮನ್: ಫಖ್ಹರ್ ಝಮಾನ್

►ಶ್ರೇಷ್ಠ ಏಕದಿನ ಬೌಲರ್: ಮುಹಮ್ಮದ್ ಝಮಾನ್

►ಶ್ರೇಷ್ಠ ಟ್ವೆಂಟಿ-20 ದಾಂಡಿಗ: ಎವಿನ್ ಲೂಯಿಸ್

►ಶ್ರೇಷ್ಠ ಟ್ವೆಂಟಿ-20 ಬೌಲರ್: ಯಜುವೇಂದ್ರ ಚಹಾಲ್

►ವರ್ಷದ ಉದಯೋನ್ಮುಖ ಆಟಗಾರ: ಕುಲ್‌ದೀಪ್ ಯಾದವ್

►ವರ್ಷದ ಶ್ರೇಷ್ಠ ನಾಯಕತ್ವ: ಹೀದರ್ ನೈಟ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News