ಹಾದಿಯಾ ಮದುವೆ ಅನೂರ್ಜಿತಗೊಳಿಸಿರುವ ಕ್ರಮ ಸಮರ್ಥನೀಯವೇ?: ಕೇರಳ ಹೈಕೋರ್ಟ್‌ಗೆ ಸುಪ್ರೀಂ ಪ್ರಶ್ನೆ
ಹೊಸದಿಲ್ಲಿ, ಫೆ.22: ಇಬ್ಬರು ವಯಸ್ಕ ವ್ಯಕ್ತಿಗಳು ಪರಸ್ಪರ ಒಪ್ಪಿ ವಿವಾಹವಾಗಿರುವಾಗ ಅವರ ಸಮ್ಮತಿಯ ಕುರಿತಂತೆ ತನಿಖೆ ನಡೆಸಲು ಆದೇಶ ನೀಡಬಹುದೇ?, ಲವ್ ಜಿಹಾದ್ ಸಂತ್ರಸ್ತೆ ಎಂದು ಹೇಳಲಾಗುತ್ತಿರುವ ಹಾದಿಯಾಳ ಮದುವೆಯನ್ನು ಅನೂರ್ಜಿತಗೊಳಿಸಿರುವ ಕೇರಳ ಉಚ್ಚ ನ್ಯಾಯಾಲಯದ ಕ್ರಮವು ಸಮರ್ಥನೀಯವೇ? ಎಂದು ಸರ್ವೋಚ್ಚ ನ್ಯಾಯಾಲಯ ಗುರುವಾರದಂದು ಪ್ರಶ್ನಿಸಿದೆ.
ದೇಶಾದ್ಯಂತ ಸುದ್ದಿಯಾಗಿರುವ ಹಾದಿಯಾ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಆಲಿಸುತ್ತಿದ್ದ ವೇಳೆ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ಮತ್ತು ನ್ಯಾಯಾಧೀಶ ಎ.ಎಂ ಖಾನ್ವಿಲ್ಕರ್ ಹಾಗೂ ಡಿ.ವೈ ಚಂದ್ರಚೂಡ್ ಅವರನ್ನೊಳಗೊಂಡ ಪೀಠವು ಈ ಪ್ರಶ್ನೆಯನ್ನು ಕೇಳಿದೆ.
ಮದುವೆ ಮತ್ತು ತನಿಖೆ ಎರಡೂ ಬೇರೆಬೇರೆಯಾಗಿದೆ. ಮದುವೆಯ ಬಗ್ಗೆ ಹೇಳುವುದಾದರೆ ಅದನ್ನು ತನಿಖೆ ನಡೆಸುವ ಅಗತ್ಯವಿಲ್ಲ. ಅದಕ್ಕೂ ತನಿಖೆಗೂ ಸಂಬಂಧವಿಲ್ಲ. ನೀವು ಇತರ ಯಾವುದೇ ವಿಷಯವನ್ನು ತನಿಖೆ ನಡೆಸಬಹುದು ಎಂದು ಪೀಠ ತಿಳಿಸಿದೆ. ಸದ್ಯ ಪ್ರಕರಣದ ಕೇಂದ್ರಬಿಂದುವಾಗಿರುವ 25ರ ಹರೆಯದ ಹಾದಿಯಾ ಮಂಗಳವಾರದಂದು ನ್ಯಾಯಾಲಯದಲ್ಲಿ ಅಫಿದಾವಿತ್ ಹಾಕಿದ್ದು, ತಾನು ಮನಪೂರ್ವಕವಾಗಿ ಇಸ್ಲಾಂಗೆ ಮತಾಂತರಗೊಂಡಿದ್ದು ತನ್ನ ಪತಿ ಶಫಿನ್ ಜಹಾನ್ ಜೊತೆ ಬದುಕಲು ಬಯಸುತ್ತೇನೆ ಎಂದು ತಿಳಿಸಿದ್ದಳು.
ಹಾದಿಯಾಳ ವಿವಾಹವನ್ನು ಅನೂರ್ಜಿತಗೊಳಿಸಿದ ಕೇರಳ ಉಚ್ಚ ನ್ಯಾಯಾಲಯ ಆಕೆಯನ್ನು ಆಕೆಯ ಹೆತ್ತವರ ಜೊತೆ ಕಳುಹಿಸಿತ್ತು. ನ್ಯಾಯಾಲಯದ ಈ ಕ್ರಮದ ವಿರುದ್ಧ ಶಫಿನ್ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ಕಳೆದ ವರ್ಷ ನವೆಂಬರ್ 27ರಂದು ಹಾದಿಯಾಳನ್ನು ಆಕೆಯ ಹೆತ್ತವರಿಂದ ಮುಕ್ತಗೊಳಿಸಿದ ಶ್ರೇಷ್ಠ ನ್ಯಾಯಾಲಯ ಆಕೆ ತನ್ನ ವಿದ್ಯಾಭ್ಯಾಸ ಮುಂದುವರಿಸಲು ಕಾಲೇಜ್‌ಗೆ ತೆರಳಲು ಅನುಮತಿ ನೀಡಿತ್ತು. ತಾನು ಪತಿಯ ಮನೆಗೆ ಹೋಗಲು ಬಯಸುವುದಾಗಿ ಹಾದಿಯಾ ನ್ಯಾಯಾಲಯದಲ್ಲಿ ತಿಳಿಸಿದ್ದಳು.