×
Ad

‘ಪದ್ಮಾವತ್’ನಲ್ಲಿ ಸತಿ ವೈಭವೀಕರಣ ಆರೋಪ : ಅರ್ಜಿ ತಿರಸ್ಕರಿಸಿದ ಹೈಕೋರ್ಟ್

Update: 2018-02-22 21:24 IST

ಹೊಸದಿಲ್ಲಿ, ಫೆ.22: ಹಿಂದಿ ಸಿನೆಮಾ ‘ಪದ್ಮಾವತ್’ನಲ್ಲಿ ಸತಿ ಪದ್ಧತಿಯನ್ನು ವೈಭವೀಕರಿಸಲಾಗಿದ್ದು ಸಿನೆಮಾದ ನಿರ್ಮಾಪಕರು ಹಾಗೂ ನಿರ್ದೇಶಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ದಿಲ್ಲಿ ಹೈಕೋರ್ಟ್ ತಳ್ಳಿಹಾಕಿದೆ.

ಸಿನೆಮಾ ಬಿಡುಗಡೆಯಾಗಿದ್ದು, ಸಾರ್ವಜನಿಕರು ಈಗಾಗಲೇ ವೀಕ್ಷಿಸುತ್ತಿದ್ದಾರೆ. ಅರ್ಜಿದಾರರಿಗೆ ಯಾವುದೇ ದೂರುಗಳಿದ್ದರೂ ಅದನ್ನು ಸೆನ್ಸಾರ್ ಮಂಡಳಿಯೆದುರು ಸೂಕ್ತ ಸಂದರ್ಭದಲ್ಲಿ ಸಲ್ಲಿಸಬೇಕಿತ್ತು. ಈಗ ಸಲ್ಲಿಕೆಯಾಗಿರುವ ಈ ಅರ್ಜಿ ಪರಿಗಣನೆಗೆ ಅರ್ಹ ವಾಗಿಲ್ಲ ಎಂದು ತಿಳಿಸಿರುವ ಕೋರ್ಟ್, ಅರ್ಜಿಯನ್ನು ತಳ್ಳಿಹಾಕಿದೆ.

 ಸಿನೆಮಾದಲ್ಲಿ ಪ್ರದರ್ಶಿಸಲಾಗಿರುವ ಸತಿ ಪದ್ಧತಿಯ ದೃಶ್ಯವನ್ನು ತೆಗೆದುಹಾಕುವಂತೆ ಹಾಗೂ ನಿರ್ಮಾಪಕರಲ್ಲಿ ಒಬ್ಬರಾದ ಅಜಿತ್ ಅಂಧಾರೆ ಮತ್ತು ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ವಿರುದ್ಧ ಎಫ್‌ಐಆರ್ ದಾಖಲಿಸಲು ದಿಲ್ಲಿ ಪೊಲೀಸರಿಗೆ ಸೂಚಿಸಬೇಕು ಎಂದು ಕೋರಿ ಸ್ವಾಮಿ ಅಗ್ನಿವೇಶ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಸಿನೆಮಾ ಪ್ರದರ್ಶನದ ಮೊದಲು ಪ್ರದರ್ಶಿಸುವ ‘ನಿರಾಕರಣೆ’ ಪತ್ರದಲ್ಲಿ , ಈ ಸಿನೆಮ ಕಾದಂಬರಿ ಆಧಾರಿತವಾಗಿದೆ ಮತ್ತು ನಿರ್ಮಾಪಕ ಅಥವಾ ನಿರ್ದೇಶಕರ ಸ್ವಂತ ಅಭಿಪ್ರಾಯದ ಆಧಾರಿತವಲ್ಲ ಎಂದು ಸ್ಪಷ್ಟಪಡಿಸಲಾಗಿದೆ ಎಂದು ನ್ಯಾಯಾಲಯ ತಿಳಿಸಿತು. ಅರ್ಜಿಯನ್ನು ವಿರೋಧಿಸಿದ ಕೇಂದ್ರ ಸರಕಾರದ ವಕೀಲ ಮನೀಷ್ ಮೋಹನ್, ಎಲ್ಲಾ ಅಂಶಗಳನ್ನೂ ಪರಿಗಣಿಸಿದ ಬಳಿಕವೇ ಸಿನೆಮಾವನ್ನು ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ ಎಂದು ತಿಳಿಸಿದರು.

ಇಂದಿನ ಸಂದರ್ಭ ಹಾಗೂ ಕಾಲದಲ್ಲಿ, ಕೇವಲ ಸಿನೆಮಾದ ದೃಶ್ಯವೊಂದರಲ್ಲಿ ಸತಿ ಪದ್ಧತಿಯಂತಹ ಆಚರಣೆಯನ್ನು ವೀಕ್ಷಿಸಿದ ಮಾತ್ರಕ್ಕೆ ಜನರು ಅದನ್ನು ಅನುಸರಿಸುತ್ತಾರೆ ಎಂಬ ಅರ್ಜಿದಾರರ ವಾದವನ್ನು ಒಪ್ಪಲು ಆಗದು ಎಂದು ನ್ಯಾಯಾಲಯ ತಿಳಿಸಿ ಅರ್ಜಿಯನ್ನು ತಳ್ಳಿಹಾಕಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News