ಕರ್ನಾಟಕ ತಂಡ ಫೈನಲ್ ಗೆ

Update: 2018-02-24 18:12 GMT

ಹೊಸದಿಲ್ಲಿ, ಫೆ.24: ವಿಜಯ್ ಹಝಾರೆ ಟ್ರೋಫಿ ಸೆಮಿಫೈನಲ್‌ನಲ್ಲಿ ಇಂದು ಮಹಾರಾಷ್ಟ್ರದ ವಿರುದ್ಧ ಭರ್ಜರಿ ಜಯ ಗಳಿಸಿರುವ ಕರ್ನಾಟಕ ಫೈನಲ್ ಪ್ರವೇಶಿಸಿದೆ.

 ಫಿರೋಝ್ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ಇಂದು ನಡೆದ ಸೆಮಿಫೈನಲ್ ಪಂದ್ಯದಲ್ಲಿ ಗೆಲುವಿಗೆ 161 ರನ್‌ಗಳ ಸವಾಲನ್ನು ಪಡೆದ ಕರ್ನಾಟಕ ತಂಡ ಇನ್ನೂ 117 ಎಸೆತಗಳು ಬಾಕಿ ಇರುವಾಗಲೇ 1 ವಿಕೆಟ್ ನಷ್ಟದಲ್ಲಿ 164 ರನ್ ಗಳಿಸಿ ಗೆಲುವಿನ ದಡ ಸೇರಿತು. ಮಯಾಂಕ್ ಅಗರ್‌ವಾಲ್ 81 ರನ್(116ನಿ, 86ಎ, 8ಬೌ,1ಸಿ) ಮತ್ತು ನಾಯಕ ಕರುಣ್ ನಾಯರ್ ಔಟಾಗದೆ 70 ರನ್(125ನಿ, 90ಎ, 10ಬೌ) ಗಳಿಸಿ ತಂಡಕ್ಕೆ ಫೈನಲ್‌ನಲ್ಲಿ ಅವಕಾಶ ದೃಢಪಡಿಸಲು ನೆರವಾದರು.

ಕರ್ನಾಟಕ ತಂಡದ ಆರಂಭಿಕ ದಾಂಡಿಗರಾದ ಮಯಾಂಕ್ ಅಗರವಾಲ್ ಮತ್ತು ಕರುಣ್ ನಾಯರ್ ಅವರು ಮೊದಲ ವಿಕೆಟ್‌ಗೆ 28.5 ಓವರ್‌ಗಳಲ್ಲಿ 155 ರನ್ ಗಳಿಸುವ ಮೂಲಕ ಉತ್ತಮ ಅಡಿಪಾಯ ಹಾಕಿಕೊಟ್ಟರು. ತಂಡದ ಗೆಲುವಿಗೆ 6 ರನ್‌ಗಳ ಆವಶ್ಯಕತೆ ಇದ್ದಾಗ ಅಗರವಾಲ್ ಅವರನ್ನು ಮಹಾರಾಷ್ಟ್ರ ತಂಡದ ಸತ್ಯಜಿತ್ ಬಚ್ಚಾವ್ ಅವರು ಪೆವಿಲಿಯನ್‌ಗೆ ಅಟ್ಟಿದರು. ಬಚ್ಚಾವ್ ಎಸೆತದಲ್ಲಿ ಅಗರವಾಲ್ ಅವರು ನಿಖಿಲ್ ನಾಯ್ಕಾಗೆ ಕ್ಯಾಚ್ ನೀಡಿದರು.

 ಬಳಿಕ ಕ್ರೀಸ್‌ಗೆ ಆಗಮಿಸಿದ ಆರ್.ಸಮರ್ಥ್ ಔಟಾಗದೆ 3 ರನ್ ಗಳಿಸಿದರು. 30.3ನೇ ಓವರ್‌ನಲ್ಲಿ ಕರುಣ್ ನಾಯರ್ ಅವರು ಬಚ್ಚಾವ್ ಎಸೆತದಲ್ಲಿ ಚೆಂಡನ್ನು ಬೌಂಡರಿ ಗೆರೆ ದಾಟಿಸಿ ಗೆಲುವಿನ ವಿಧಿ ವಿಧಾನವನ್ನು ಪೂರೈಸಿದರು.

ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಮಹಾರಾಷ್ಟ್ರ ತಂಡ ಕರ್ನಾಟಕದ ಆಟಗಾರರ ಸಂಘಟಿತ ದಾಳಿಗೆ ಸಿಲುಕಿ 44.3 ಓವರ್‌ಗಳಲ್ಲಿ 160 ರನ್‌ಗಳಿಗೆ ಆಲೌಟಾಗಿತ್ತು.

 ಶ್ರೀಕಾಂತ್ ಮುಂಢೆ (50) ತಂಡದ ಪರ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದರು. ಇವರನ್ನು ಹೊರತುಪಡಿಸಿದರೆ ಎನ್.ಎಸ್.ಶೇಖ್ 42 ರನ್ ಗಳಿಸಿದರು.

ಮಹಾರಾಷ್ಟ್ರ ತಂಡ ಮೊದಲ ಓವರ್‌ನ 5ನೇ ಎಸೆತದಲ್ಲಿ ಋತುರಾಜ್ ಗಾಯಕ್‌ವಾಡ್ (1) ವಿಕೆಟ್‌ನ್ನು ಕಳೆದುಕೊಂಡಿತ್ತು. ಪ್ರಸಿದ್ಧ್ ಕೃಷ್ಣ ಅವರ ಓವರ್‌ನ 5ನೇ ಎಸೆತದಲ್ಲಿ ಗಾಯಕ್‌ವಾಡ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.

ಎರಡನೇ ವಿಕೆಟ್‌ಗೆ ಮುಂಢೆ ಮತ್ತು ನಾಯಕ ರಾಹುಲ್ ತ್ರಿಪಾಠಿ 57ರನ್‌ಗಳ ಜೊತೆಯಾಟ ನೀಡಿದರು. ತ್ರಿಪಾಠಿ 16 ರನ್ ಗಳಿಸಿದರು.

ತ್ರಿಪಾಠಿ ನಿರ್ಗಮನದ ಬಳಿಕ ಅಂಕಿತ್ ಬಾವ್ನೆ ಕ್ರೀಸ್‌ಗೆ ಆಗಮಿಸಿದರು. ಇವರ ಜೊತೆಯಾಟದಲ್ಲಿ 36 ರನ್ ಬಂತು. ಮುಂಢೆ 107 ನಿಮಿಷಗಳ ಬ್ಯಾಟಿಂಗ್‌ನಲ್ಲಿ 77 ಎಸೆತಗಳನ್ನು ಎದುರಿಸಿದರು. 5 ಬೌಂಡರಿಗಳ ಸಹಾಯದಿಂದ ಅರ್ಧಶತಕ ದಾಖಲಿಸಿ ರೋನಿತ್ ಮೋರೆಗೆ ವಿಕೆಟ್ ಒಪ್ಪಿಸಿದರು. ಬಾವ್ನೆ 18 ರನ್ ಗಳಿಸಿದರು.

 ಮುಂಢೆ ಔಟಾದ ಬಳಿಕ ಮಹಾರಾಷ್ಟ್ರದ ಬ್ಯಾಟಿಂಗ್ ದುರ್ಬಲಗೊಂಡಿತು. ಕೇವಲ 65 ರನ್‌ಗಳಿಗೆ ಅಂತಿಮ 7 ವಿಕೆಟ್‌ಗಳು ಉರುಳಿತು. ಅಂತಿಮವಾಗಿ ಶೇಖ್ ಅವರು ಪ್ರಸಿದ್ಧ್ ಕೃಷ್ಣ ಎಸೆತದಲ್ಲಿ ಅಗರವಾಲ್ ಅವರಿಗೆ ಕ್ಯಾಚ್ ನೀಡುವುದರೊಂದಿಗೆ ಮಹಾರಾಷ್ಟ್ರದ ಇನಿಂಗ್ಸ್ ಮುಕ್ತಾಯಗೊಂಡಿತು. ಕರ್ನಾಟಕ ತಂಡದ ಗೌತಮ್ 26ಕ್ಕೆ 3 ವಿಕೆಟ್, ಪ್ರಸಿದ್ಧ್ ಕೃಷ್ಣ 26ಕ್ಕೆ 2, ಟಿ.ಪ್ರದೀಪ್, ರೋನಿತ್ ಮೋರೆ ಮತ್ತು ಕೆ.ಗೌತಮ್ ತಲಾ 1 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News