‘ಅವಳಿ ಸರಣಿ’ ವಶಪಡಿಸಿಕೊಂಡ ಭಾರತದ ವನಿತೆಯರು

Update: 2018-02-24 18:19 GMT

ಕೇಪ್‌ಟೌನ್, ಫೆ.24: ದಕ್ಷಿಣ ಆಫ್ರಿಕ ವಿರುದ್ಧದ ಐದನೇ ಹಾಗೂ ಅಂತಿಮ ಟ್ವೆಂಟಿ-20 ಪಂದ್ಯದಲ್ಲಿ ಭಾರತ ಇಂದು 54 ರನ್‌ಗಳ ಗೆಲುವಿನೊಂದಿಗೆ, ಐದು ಪಂದ್ಯಗಳ ಸರಣಿಯನ್ನು 3-1 ಅಂತರದಲ್ಲಿ ವಶಪಡಿಸಿಕೊಂಡಿದೆ.

 ದಕ್ಷಿಣ ಆಫ್ರಿಕ ವಿರುದ್ಧದ ಪ್ರವಾಸ ಸರಣಿಯಲ್ಲಿ ಭಾರತದ ವನಿತೆಯರ ತಂಡ ಟ್ವೆಂಟಿ-20 (3-1) ಮತ್ತು ಏಕದಿನ ಸರಣಿಯನ್ನು (2-1) ಅಂತರದಲ್ಲಿ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಭಾರತದ ಮಿಥಾಲಿ ರಾಜ್ ನಾಯಕತ್ವದ ಏಕದಿನ ಕ್ರಿಕೆಟ್ ತಂಡ ಮತ್ತು ಹರ್ಮನ್ ಪ್ರೀತ್ ಕೌರ್ ನಾಯಕತ್ವದ ಟ್ವೆಂಟಿ-20 ತಂಡ ಎರಡೂ ಸರಣಿಗಳನ್ನು ವಶಪಡಿಸಿಕೊಂಡು ಹೊಸ ದಾಖಲೆ ಬರೆದಿದೆ. ದಕ್ಷಿಣ ಆಫ್ರಿಕದಲ್ಲಿ ಅವಳಿ ಸರಣಿ ಗೆಲುವಿನ ದಾಖಲೆ ಬರೆದ ವಿಶ್ವದ ಮೊದಲ ತಂಡ ಎನಿಸಿಕೊಂಡಿದೆ. ಮಿಥಾಲಿರಾಜ್ ಅವರು ಪಂದ್ಯಶ್ರೇಷ್ಠ ಮತ್ತು ಸರಣಿಶ್ರೇಷ್ಠ ಪ್ರಶಸ್ತಿ ಬಾಚಿಕೊಂಡರು.

 ಇಂದು ನಡೆದ ಅಂತಿಮ ಟ್ವೆಂಟಿ-20 ಪಂದ್ಯದಲ್ಲಿ ಗೆಲುವಿಗೆ 167 ರನ್ ಗಳಿಸಬೇಕಿದ್ದ ದಕ್ಷಿಣ ಆಫ್ರಿಕ ತಂಡ ಭಾರತದ ಶಿಖಾ ಪಾಂಡೆ( 16ಕ್ಕೆ 3), ರಾಜೇಶ್ವರಿ ಗಾಯಕ್‌ವಾಡ್ (26ಕ್ಕೆ 3) , ರುಮೆಲಿ ಧಾರ್(26ಕ್ಕೆ 3) ಮತ್ತು ಪೂನಮ್ ಯಾದವ್(25ಕ್ಕೆ 1) ದಾಳಿಗೆ ತತ್ತರಿಸಿ 18 ಓವರ್‌ಗಳಲ್ಲಿ 112 ರನ್‌ಗಳಿಗೆ ಆಲೌಟಾಗಿದೆ. ದಕ್ಷಿಣ ಆಫ್ರಿಕ ತಂಡದ ಎಂ.ಕ್ಯಾಪ್(27), ಟ್ರೆಯಾನ್(25), ಎಂ.ಡು ಪ್ರೀಝ್(17) ಮತ್ತು ನಾಯಕಿ ಡಿ ವ್ಯಾನ್ ನಿಕೆರ್ಕ್(10) ಎರಡಂಕೆಯ ಸ್ಕೋರ್ ದಾಖಲಿಸಿದರು.

►ಭಾರತ 166/4: ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಭಾರತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 166 ರನ್ ಗಳಿಸಿತ್ತು.

ಮಿಥಾಲಿ ರಾಜ್ ಜೊತೆ ಇನಿಂಗ್ಸ್ ಆರಂಭಿಸಿದ ಸ್ಮತಿ ಮಂಧಾನ (13) ಬೇಗನೆ ಔಟಾದರು. ಎರಡನೇ ವಿಕೆಟ್‌ಗೆ ಮಿಥಾಲಿರಾಜ್ ಮತ್ತು ಯುವ ಆಟಗಾರ್ತಿ ಜಮಿಮಾ ರೊಡ್ರಿಗಸ್‌ಎರಡನೇ ವಿಕೆಟ್‌ಗೆ 98 ರನ್‌ಗಳ ಜೊತೆಯಾಟ ನೀಡಿದರು. ಮಿಥಾಲಿರಾಜ್ 62 ರನ್(50ಎ, 8ಬೌ,3ಸಿ) ಮತ್ತು ಜಮೀಮಾ 44ರನ್(34ಎ, 3ಬೌ,2ಸಿ) ಗಳಿಸಿದರು.

ನಾಲ್ಕನೇ ವಿಕೆಟ್‌ಗೆ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ವೇದಾ ಕೃಷ್ಣಮೂರ್ತಿ 32 ರನ್ ಜಮೆ ಮಾಡಿದರು. ವೇದಾಕೃಷ್ಣಮೂರ್ತಿ (8) ಕೊನೆಯ ಓವರ್‌ನ ಕೊನೆಯ ಎಸೆತದಲ್ಲಿ ಅನಗತ್ಯವಾಗಿ ರನ್ ಕದಿಯಲು ಹೋಗಿ ರನೌಟಾದರು. ಕೌರ್ 27 ರನ್(17ಎ, 1ಬೌ,2ಸಿ) ಗಳಿಸಿ ಔಟಾಗದೆ ಉಳಿದರು.

ಸಂಕ್ಷಿಪ್ತ ಸ್ಕೋರ್ ವಿವರ

►ಭಾರತ 20 ಓವರ್‌ಗಳಲ್ಲಿ 166/4( ಮಿಥಾಲಿರಾಜ್ 62, ಜಮೀಮಾ 44; ಎಂ.ಕಾಪ್ 22ಕ್ಕೆ 1).

►ದಕ್ಷಿಣ ಆಫ್ರಿಕ 18 ಓವರ್‌ಗಳಲ್ಲಿ ಆಲೌಟ್ 112(ಎಂ.ಕ್ಯಾಪ್27, ಟ್ರೆಯಾನ್ 25; ಶಿಖಾ ಪಾಂಡೆ 26ಕ್ಕೆ 3, ರಾಜೇಶ್ವರಿ ಗಾಯಕ್‌ವಾಡ್ 26ಕ್ಕೆ 3).

►ಪಂದ್ಯಶ್ರೇಷ್ಠ ಮತ್ತು ಸರಣಿಶ್ರೇಷ್ಠ ಪ್ರಶಸ್ತಿ : ಮಿಥಾಲಿ ರಾಜ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News