ಬಲ್ಗೇರಿಯ ಬಾಕ್ಸಿಂಗ್ ಟೂರ್ನಮೆಂಟ್: ವಿಕಾಸ್ ಕೃಷ್ಣಗೆ ಒಲಿದ ಬಂಗಾರ
ಹೊಸದಿಲ್ಲಿ, ಫೆ.26: ಬಲ್ಗೇರಿಯದ ರಾಜಧಾನಿ ಸೋಫಿಯಾದಲ್ಲಿ ನಡೆದ ಸ್ಟ್ರಾಂಡ್ಜಾ ಸ್ಮಾರಕ ಬಾಕ್ಸಿಂಗ್ ಟೂರ್ನಮೆಂಟ್‌ನಲ್ಲಿ ಭಾರತದ ಬಾಕ್ಸರ್ ವಿಕಾಸ್ ಕೃಷ್ಣ ಯಾದವ್ ಸಂಭ್ರಮ ಇಮ್ಮಡಿಯಾಗಿದೆ. 26ರ ಹರೆಯದ ವಿಕಾಸ್ 75ಕೆಜಿ ಮಿಡ್ಲ್ -ವೇಟ್ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದಲ್ಲದೆ ಟೂರ್ನಿಯ ಶ್ರೇಷ್ಠ ಬಾಕ್ಸರ್ ಗೌರವಕ್ಕೂ ಪಾತ್ರರಾಗಿದ್ದಾರೆ.
ಅಮೆರಿಕದ ಟ್ರಾಯ್ ಇಸ್ಲೇ ಅವರನ್ನು ಮಣಿಸಿದ ವಿಕಾಸ್ ಪದಕದ ಬರ ನೀಗಿಸಿಕೊಂಡರು. ಕಳೆದ ವರ್ಷದ ಎಪ್ರಿಲ್-ಮೇನಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಕೊನೆಯ ಬಾರಿ ಪದಕ ಜಯಿಸಿದ್ದರು.
ಕೈನೋವಿನಿಂದಾಗಿ ವೃತ್ತಿಜೀವನದಲ್ಲಿ ಸಮಸ್ಯೆ ಎದುರಿಸಿದ್ದ ವಿಕಾಸ್, ಕಳೆದ ವರ್ಷ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ವಾಕ್‌ಓವರ್ ಪಡೆದ ಬಳಿಕ ಶಿಸ್ತುಕ್ರಮ ಎದುರಿಸಿದ್ದರು.
‘‘ಇದು ನನ್ನ ಪಾಲಿಗೆ ಮರುಹೋರಾಟವಾಗಿದೆ.ಇದೀಗ ನಾನು ಬಲಿಷ್ಠ ಆಟಗಾರನಾಗಿದ್ದೇನೆ. ನನ್ನ ತೂಕವನ್ನು ಕಾಯ್ದುಕೊಂಡಿರುವುದು ಈ ಹಿಂದೆ ಸಮಸ್ಯೆಯಾಗಿ ಪರಿಣಮಿಸಿತ್ತು. ಈಗ ಎಲ್ಲವೂ ಸರಿಯಾಗಿದೆ. ನನ್ನ ತಂತ್ರಗಾರಿಕೆಯಲ್ಲಿ ಸುಧಾರಣೆಯಾಗಿದೆ. ಪ್ರಶಸ್ತಿ ಸುತ್ತಿಗೆ ತಲುಪುವ ಮೊದಲು ಬಲಿಷ್ಠ ಎದುರಾಳಿಯನ್ನು ಮಣಿಸಿದ್ದು, ಇದು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ’’ ಎಂದು ವಿಕಾಸ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ವಿಕಾಸ್ ಅವರೊಂದಿಗೆ ಅಮಿತ್ ಪಾಂಘಲ್(49 ಕೆಜಿ) ಚಿನ್ನ ಜಯಿಸಿದ್ದು, ಟೂರ್ನಿಯಲ್ಲಿ ಭಾರತ ಶ್ರೇಷ್ಠ ಪ್ರದರ್ಶನ ನೀಡಿದೆ. ಭಾರತ ಟೂರ್ನಿಯಲ್ಲಿ ಒಟ್ಟು 11 ಪದಕಗಳನ್ನು ಜಯಿಸಿದೆ. ಪುರುಷರು 5 ಹಾಗೂ ಮಹಿಳಾ ಬಾಕ್ಸರ್‌ಗಳು 6 ಪದಕಗಳನ್ನು ಜಯಿಸಿದ್ದಾರೆ. ಒಟ್ಟಾರೆ ಭಾರತ 2 ಚಿನ್ನ, 3 ಬೆಳ್ಳಿ ಹಾಗೂ ಆರು ಕಂಚಿನ ಪದಕ ಜಯಿಸಿದೆ. ಎಂ.ಸಿ. ಮೇರಿಕೋಮ್(48ಕೆಜಿ), ಸೀಮಾ ಪೂನಿಯಾ(+81ಕೆಜಿ) ಹಾಗೂ ಗೌರವ್ ಸೋಳಂಕಿ(52ಕೆಜಿ) ಬೆಳ್ಳಿ ಜಯಿಸಿದರೆ, ಮಹಿಳಾ ವಿಭಾಗದಲ್ಲಿ ಮೀನಾ ಕುಮಾರಿ ದೇವಿ(54ಕೆಜಿ), ಎಲ್.ಸರಿತಾದೇವಿ(60ಕೆಜಿ), ಸವೀಟಿ ಬೂರಾ(75ಕೆಜಿ) ಹಾಗೂ ಭಾಗ್ಯವತಿ ಕಚಾರಿ(81ಕೆಜಿ) ಕಂಚು ಜಯಿಸಿದರು. ಕಳೆದ ಆವೃತ್ತಿಯಲ್ಲಿ ಪುರುಷರ ವಿಭಾಗದಲ್ಲಿ ಬೆಳ್ಳಿ ಜಯಿಸಿದ್ದ ಮುಹಮ್ಮದ್ ಹಸಮುದ್ದೀನ್(56ಕೆಜಿ) ಹಾಗೂ ಏಷ್ಯನ್ ಗೇಮ್ಸ್‌ನಲ್ಲಿ ಕಂಚು ಪದಕ ವಿಜೇತ ಸತೀಶ್ ಕುಮಾರ್(+91ಕೆಜಿ) ಮೂರನೇ ಸ್ಥಾನ ಪಡೆದು ಕಂಚಿಗೆ ತೃಪ್ತಿಪಟ್ಟರು.