×
Ad

ಆಸೀಸ್ ಸರಣಿ ಬಳಿಕ ಮೊರ್ಕೆಲ್ ನಿವೃತ್ತಿ

Update: 2018-02-26 23:43 IST

ಕೇಪ್‌ಟೌನ್, ಫೆ.26: ‘‘ಆಸ್ಟ್ರೇಲಿಯ ವಿರುದ್ಧದ ಟೆಸ್ಟ್ ಸರಣಿಯ ಅಂತ್ಯಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗುವೆ’’ ಎಂದು ದಕ್ಷಿಣ ಆಫ್ರಿಕದ ವೇಗದ ಬೌಲರ್ ಮೊರ್ನೆ ಮೊರ್ಕೆಲ್ ಹೇಳಿದ್ದಾರೆ.

ದಕ್ಷಿಣ ಆಫ್ರಿಕ ತಂಡ ಮಾ.1 ರಿಂದ ಡರ್ಬನ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ.

 ಜೋಹಾನ್ಸ್‌ಬರ್ಗ್‌ನಲ್ಲಿ ಎ.3ರಂದು ನಾಲ್ಕನೇ ಟೆಸ್ಟ್ ಕೊನೆಗೊಂಡ ತಕ್ಷಣ ಮೊರ್ಕೆಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಸರಿಯಲಿದ್ದಾರೆ. ಮೊರ್ಕೆಲ್ 87 ಟೆಸ್ಟ್‌ಗಳಲ್ಲಿ 294 ವಿಕೆಟ್ ಗಳನ್ನು ಗಳಿಸಿದ್ದಾರೆ.

2006ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಕಾಲಿಟ್ಟಿದ್ದ ಮೊರ್ಕೆಲ್ ಅವರು 2009ರಲ್ಲಿ ಮಖಾಯ ಎನ್‌ಟಿನಿ ನಿವೃತ್ತಿಯಾದ ಬಳಿಕ ಡೇಲ್ ಸ್ಟೇಯ್ನಿ ಜೊತೆಗೂಡಿ ದಕ್ಷಿಣ ಆಫ್ರಿಕದ ವೇಗದ ದಾಳಿಗೆ ಶಕ್ತಿ ತುಂಬಿದ್ದರು. 2015ರಲ್ಲಿ ಸ್ಟೇಯ್ನಿ ಹಾಗೂ ಫಿಲ್ಯಾಂಡರ್ ಅನುಪಸ್ಥಿತಿಯಲ್ಲಿ ಭಾರತ ವಿರುದ್ಧ ಸರಣಿಯಲ್ಲಿ ವೇಗದ ಬೌಲಿಂಗ್ ಮುನ್ನಡೆಸಿದ್ದರು.

ಮೊರ್ಕೆಲ್ 2016ರಲ್ಲಿ ಬೆನ್ನುನೋವಿಗೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ಒಂದು ವರ್ಷ ಕಾಲ ಸಕ್ರಿಯ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. 2017ರ ಮಾರ್ಚ್‌ಗೆ ನ್ಯೂಝಿಲೆಂಡ್ ವಿರುದ್ಧ ತಂಡಕ್ಕೆ ವಾಪಸಾಗಿದ್ದರು. 2017ರಲ್ಲಿ ಇಂಗ್ಲೆಂಡ್ ಪ್ರವಾಸದ ವೇಳೆ ತಂಡದ ಪರ ಗರಿಷ್ಠ ವಿಕೆಟ್ ಪಡೆದಿದ್ದರು.

 ಏಕದಿನ ಕ್ರಿಕೆಟ್‌ನಲ್ಲಿ 117 ಪಂದ್ಯಗಳನ್ನು ಆಡಿರುವ ಮೊರ್ಕೆಲ್ 188 ವಿಕೆಟ್‌ಗಳನ್ನ್ನು ಪಡೆದಿದ್ದಾರೆ. ಟ್ವೆಂಟಿ-20 ಕ್ರಿಕೆಟ್‌ನಲ್ಲಿ 44 ಪಂದ್ಯಗಳಲ್ಲಿ 47 ವಿಕೆಟ್‌ಗಳನ್ನು ಕಬಳಿಸಿದ್ದು, ಕಳೆದ ವರ್ಷ ಲಾಹೋರ್‌ನಲ್ಲಿ ವರ್ಲ್ಡ್ ಇಲೆವೆನ್ ತಂಡದ ಪರ ಕೊನೆಯ ಪಂದ್ಯ ಆಡಿದ್ದರು. ಎಲ್ಲ ಮಾದರಿಯ ಕ್ರಿಕೆಟ್ ರ್ಯಾಂಕಿಂಗ್‌ನಲ್ಲಿ ಅಗ್ರ-10ರಲ್ಲಿ ಸ್ಥಾನ ಪಡೆದಿದ್ದ ಅವರು 2011ರಲ್ಲಿ ಏಕದಿನ ಕ್ರಿಕೆಟ್‌ನ ನಂ.1 ಬೌಲರ್ ಎನಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News