12 ವರ್ಷದ ದಲಿತ ಬಾಲಕನ ಹತ್ಯೆ
Update: 2018-02-27 19:57 IST
ಚೆನ್ನೈ, ಫೆ. 27: ತಮಿಳುನಾಡಿನ ವಿಲ್ಲಾಪುರಂ ಜಿಲ್ಲೆಯ ಗ್ರಾಮವೊಂದರಲ್ಲಿ ಅಪರಿಚಿತ ದುಷ್ಕರ್ಮಿಗಳು 12 ವರ್ಷದ ದಲಿತ ಬಾಲಕನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೈದಿದ್ದಾರೆ.
ಈ ಘಟನೆಯಲ್ಲಿ ಬಾಲಕನ ಸಹೋದರಿ ಹಾಗೂ ತಾಯಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
‘‘12 ವರ್ಷದ ಬಾಲಕನನ್ನು ಹತ್ಯೆಗೈಯಲಾಗಿದೆ. ಬಾಲಕನ 15 ವರ್ಷದ ಸಹೋದರಿ ಹಾಗೂ ತಾಯಿಯ ತಲೆಗೆ ಗಾಯಗಳಾಗಿವೆ’’ ಎಂದು ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಬಾಲಕನ ಸಹೋದರಿ ಹಾಗೂ ತಾಯಿ ಮೇಲೆ ಫೆಬ್ರವರಿ 22ರಂದು ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂಬ ಆರೋಪದ ನಡುವೆಯೂ ಈ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ರಾಜಕೀಯ ಪಕ್ಷಗಳು ಬಾಲಕನ ಸಹೋದರಿ ಹಾಗೂ ತಾಯಿ ಮೇಲೆ ಅತ್ಯಾಚಾರ ಎಸಗಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದೆ.