×
Ad

ಸರಕಾರದಿಂದ ಹಜ್ ಯಾತ್ರಿಕರಿಗೆ ವಿಮಾನಯಾನ ದರದಲ್ಲಿ ರಿಯಾಯಿತಿ

Update: 2018-02-27 21:59 IST

ಹೊಸದಿಲ್ಲಿ,ಫೆ.27: ಕೇಂದ್ರವು ಮಂಗಳವಾರ ಹಜ್ ಯಾತ್ರಿಗಳಿಗೆ ವಿಮಾನಯಾನ ದರಗಳಲ್ಲಿ ಗಣನೀಯ ರಿಯಾಯಿತಿಯನ್ನು ಪ್ರಕಟಿಸಿದೆ. ಇದೊಂದು ಮಹತ್ವದ ಹೆಜ್ಜೆ ಎಂದು ಬಣ್ಣಿಸಿರುವ ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ ಅವರು, ಈ ಬಗ್ಗೆ ಪ್ರಧಾನಿ ಕಚೇರಿಯು ಹೆಚ್ಚಿನ ಆಸಕ್ತಿ ವಹಿಸಿತ್ತು. ಈ ನಿರ್ಣಯವು ನಮ್ಮ ತುಷ್ಟೀಕರಣವಿಲ್ಲದೆ ಸಬಲೀಕರಣ ನೀತಿಗೆ ಅನುಗುಣವಾಗಿದೆ ಎಂದು ಹೇಳಿದರು.

ವಿಮಾನಯಾನ ದರಗಳನ್ನು ಕಡಿತಗೊಳಿಸುವ ನಿರ್ಧಾರವು ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತದಲ್ಲಿ ನಡೆಯುತ್ತಿದ್ದ ಹಜ್ ಯಾತ್ರಿಗಳ ರಾಜಕೀಯ ಮತ್ತು ಆರ್ಥಿಕ ಶೋಷಣೆಗೆ ಅಂತ್ಯ ಹಾಡಲಿದೆ ಎಂದೂ ಅವರು ಹೇಳಿದರು.

ಹಜ್ ಯಾತ್ರೆಗಾಗಿ ಹಿಂದಿನ ಯುಪಿಎ ಆಡಳಿತದಲ್ಲಿದ್ದ ಮತ್ತು 2018ರಲ್ಲಿ ನಿಗದಿಗೊಳಿಸಿರುವ ವಿಮಾನಯಾನ ದರಗಳನ್ನು ನಕ್ವಿ ಹೋಲಿಸಿದರು.

ಭಾರತದ 21 ವಿಮಾನ ನಿಲ್ದಾಣಗಳಿಂದ ಜಿದ್ದಾ ಮತ್ತು ಮದೀನಾಕ್ಕೆ ಪ್ರಯಾಣಿಸಲು ಏರ್ ಇಂಡಿಯಾ, ಸೌದಿ ಏರ್‌ಲೈನ್ಸ್ ಮತ್ತು ಸೌದಿಯ ಫೈನಾಸ್ ಸೇರಿದಂತೆ ವಿಮಾನಯಾನ ಸಂಸ್ಥೆಗಳಿಗೆ ಈ ಪ್ರಯಾಣದರ ಕಡಿತವು ಅನ್ವಯಿಸಲಿದೆ.

2013-14ರಲ್ಲಿ ಅಹ್ಮದಾಬಾದ್‌ನಿಂದ ಪ್ರಯಾಣದರವು 98,750 ರೂ.ಗಳಾಗಿದ್ದರೆ ಈ ವರ್ಷ ಅದು ಸುಮಾರು 65,015 ರೂ. ಆಗಿರಲಿದೆ. ಅದೇ ರೀತಿ ಮುಂಬೈನಿಂದ ಹಿಂದೆ 98,750 ರೂ.ಗಳಿದ್ದರೆ ಈಗ ಅದನ್ನು ಸುಮಾರು 57,857 ರೂ.ಗೆ ತಗ್ಗಿಸಲಾಗಿದೆ.

ಈ ವರ್ಷ ಭಾರತದಿಂದ 1.75 ಲಕ್ಷ ದಾಖಲೆ ಸಂಖ್ಯೆಯಲ್ಲಿ ಮುಸ್ಲಿಮರು ಹಜ್ ಯಾತ್ರೆಯನ್ನು ಕೈಗೊಳ್ಳಲಿದ್ದಾರೆ.

ಹಜ್ ಯಾತ್ರೆಗಾಗಿ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ಕೇಂದ್ರವು ಕಳೆದ ತಿಂಗಳು ರದ್ದುಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News