ಅಂತಾರಾಷ್ಟ್ರೀಯ ಕ್ರಿಕೆಟ್‌ನ ಯುವ ನಾಯಕನಾಗಲು ರಶೀದ್ ಖಾನ್ ಸಿದ್ಧತೆ

Update: 2018-02-27 18:16 GMT

ಹೊಸದಿಲ್ಲಿ, ಫೆ.27: ಅಫ್ಘಾನಿಸ್ತಾನದ 19ರ ಹರೆಯದ ಆಫ್-ಸ್ಪಿನ್ನರ್ ರಶೀದ್ ಖಾನ್ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಕಿರಿಯ ಕ್ರಿಕೆಟ್ ನಾಯಕ ಎನಿಸಿಕೊಳ್ಳಲು ಸಜ್ಜಾಗಿದ್ದಾರೆ. ವಿಶ್ವದ ನಂ.1 ಏಕದಿನ ಬೌಲರ್ ಆಗಿರುವ ರಶೀದ್ ಖಾಯಂ ನಾಯಕ ಅಸ್ಘರ್ ಸ್ಟಾನಿಕ್‌ಝೈ ಅನುಪಸ್ಥಿತಿಯಲ್ಲಿ ಅಫ್ಘಾನಿಸ್ತಾನ ತಂಡವನ್ನು ನಾಯಕನಾಗಿ ಮುನ್ನಡೆಸುವ ಅವಕಾಶ ಪಡೆದಿದ್ದಾರೆ. ಅಸ್ಘರ್ ಅಪೆಂಡಿಕ್ಸ್ ನಿಂದ ಬಳಲುತ್ತಿದ್ದಾರೆ.

‘‘ಅಸ್ಘರ್ 10 ದಿನಗಳ ಬಳಿಕ ಕ್ರಿಕೆಟ್‌ಗೆ ವಾಪಸಾಗಲು ವೈದ್ಯರು ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಉಪ ನಾಯಕ ರಶೀದ್ ಖಾನ್ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ’’ ಎಂದು ಅಫ್ಘಾನ್ ಕ್ರಿಕೆಟ್ ಮಂಡಳಿ ತಿಳಿಸಿದೆ. ಐಸಿಸಿ ವಿಶ್ವಕಪ್ ಅರ್ಹತಾ ಸುತ್ತಿನ ಗ್ರೂಪ್ ಹಂತದ ಪಂದ್ಯಗಳನ್ನು ಆಡಲು ಅಫ್ಘಾನಿಸ್ತಾನ ಬುಲಾವಯೊಗೆ ಪ್ರಯಾಣಿಸಲಿದೆ.

ಅಫ್ಘಾನಿಸ್ತಾನ ಮಾ.4 ರಂದು ಸ್ಕಾಟ್ಲೆಂಡ್ ತಂಡವನ್ನು ಎದುರಿಸುವ ಮೂಲಕ 2019ರ ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳಲು ತನ್ನ ಅಭಿಯಾನ ಆರಂಭಿಸಲಿದೆ.

ಕಳೆದ ವಾರ ರಶೀದ್ ಅವರು ಐಸಿಸಿ ಆಟಗಾರರ ರ್ಯಾಂಕಿಂಗ್‌ನಲ್ಲಿ ನಂ.1 ರ್ಯಾಂಕಿಗೆ ತಲುಪಿದ ಅತ್ಯಂತ ಕಿರಿಯ ಆಟಗಾರನೆಂಬ ಕೀರ್ತಿಗೆ ಭಾಜನರಾಗಿದ್ದರು.

 ಲೆಗ್-ಸ್ಪಿನ್ನರ್ ರಶೀದ್ ಖಾನ್ ಈ ತನಕ 37 ಏಕದಿನ ಪಂದ್ಯಗಳಲ್ಲಿ 86 ವಿಕೆಟ್, 29 ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 47 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News