×
Ad

ಭಾರತದ ಮಹಿಳಾ ಕ್ರಿಕೆಟ್ ತಂಡಕ್ಕೆ ಮಿಥಾಲಿ ನಾಯಕಿ

Update: 2018-02-27 23:53 IST

ಹೊಸದಿಲ್ಲಿ,ಫೆ.27: ಆಸ್ಟ್ರೇಲಿಯ ವಿರುದ್ಧ ಮಾ.12 ರಂದು ವಡೋದರದಲ್ಲಿ ಆರಂಭವಾಗಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ 15 ಸದಸ್ಯೆಯರನ್ನು ಒಳಗೊಂಡ ಭಾರತದ ಮಹಿಳಾ ಕ್ರಿಕೆಟ್ ತಂಡವನ್ನು ಮಂಗಳವಾರ ಪ್ರಕಟಿಸಲಾಗಿದೆ. ಮಿಥಾಲಿ ರಾಜ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

‘‘ ಆಸ್ಟ್ರೇಲಿಯ ಮಹಿಳಾ ತಂಡದ ವಿರುದ್ಧ ನಡೆಯಲಿರುವ ಪೇಟಿಎಂ ಏಕದಿನ ಸರಣಿಗೆ ಅಖಿಲ ಭಾರತ ಮಹಿಳಾ ಆಯ್ಕೆ ಸಮಿತಿಯು ಭಾರತ ತಂಡವನ್ನು ಆಯ್ಕೆ ಮಾಡಿದೆ. ಐಸಿಸಿ ಮಹಿಳಾ ಚಾಂಪಿಯನ್‌ಶಿಪ್(2017-2020)ಭಾಗವಾಗಿ ವಡೋದರದಲ್ಲಿ 3 ಪಂದ್ಯಗಳ ಏಕದಿನ ಸರಣಿ ನಡೆಯಲಿದೆ’’ ಎಂದು ಬಿಸಿಸಿಐ ಕಾರ್ಯದರ್ಶಿ ಅಮಿತಾಭ್ ಚೌಧರಿ ಹೇಳಿದ್ದಾರೆ.

 ದಕ್ಷಿಣ ಆಫ್ರಿಕ ಪ್ರವಾಸದಲ್ಲಿ ಭಾರತದ ಮಹಿಳಾ ತಂಡ ಯಶಸ್ವಿ ಪ್ರದರ್ಶನ ನೀಡಿದೆ. ಮಿಥಾಲಿ ನೇತೃತ್ವದಲ್ಲಿ ಏಕದಿನ ಸರಣಿಯನ್ನು 2-1 ರಿಂದ ಜಯಿಸಿದ್ದ ಭಾರತ ಹರ್ಮನ್‌ಪ್ರೀತ್ ಕೌರ್ ನಾಯಕತ್ವದಲ್ಲಿ 5 ಪಂದ್ಯಗಳ ಟ್ವೆಂಟಿ-20 ಸರಣಿಯನ್ನು 3-1 ಅಂತರದಿಂದ ಗೆದ್ದುಕೊಂಡಿತ್ತು. ಈ ಮೂಲಕ ಹರಿಣಗಳ ನಾಡಿನಲ್ಲಿ ಅಪರೂಪದ ಅವಳಿ ಸರಣಿಯನ್ನು ವಶಪಡಿಸಿಕೊಂಡಿತ್ತು.

ಭಾರತ-ಆಸ್ಟ್ರೇಲಿಯ ಏಕದಿನ ಸರಣಿ ಮಾ.12 ರಿಂದ 18ರ ತನಕ ನಡೆಯಲಿದೆ. ಮೊದಲ ಪಂದ್ಯ ಮಾ.12ರಂದು, ಎರಡು ಹಾಗೂ ಮೂರನೇ ಪಂದ್ಯ ಕ್ರಮವಾಗಿ ಮಾ.15 ಹಾಗೂ 18 ರಂದು ವಡೋದರದಲ್ಲಿ ನಡೆಯಲಿದೆ. ಏಕದಿನ ಸರಣಿ ಕೊನೆಗೊಂಡ ಬೆನ್ನಿಗೇ ಟ್ವೆಂಟಿ-20 ಸರಣಿ ಆರಂಭವಾಗಲಿದೆ. ಈ ಸರಣಿಗೆ ಶೀಘ್ರವೇ ತಂಡ ಪ್ರಕಟಿಸಲಾಗುತ್ತದೆ ಎಂದು ಬಿಸಿಸಿಐ ತಿಳಿಸಿದೆ.

ಭಾರತ ಮಹಿಳಾ ಏಕದಿನ ತಂಡ

ಮಿಥಾಲಿ ರಾಜ್(ನಾಯಕಿ), ಹರ್ಮನ್‌ಪ್ರೀತ್ ಕೌರ್(ಉಪ ನಾಯಕಿ), ಸ್ಮತಿ ಮಂಧಾನಾ, ಪೂನಂ ರಾವತ್, ಜೆ. ರೊಡ್ರಿಗಸ್, ವೇದಾ ಕೃಷ್ಣಮೂರ್ತಿ, ಮೋನಾ ಮೆಶ್ರಾಂ, ಸುಶ್ಮಾ ವರ್ಮಾ(ವಿಕೆಟ್‌ಕೀಪರ್), ಏಕ್ತಾ ಬಿಶ್ತ್, ಪೂನಂ ಯಾದವ್, ರಾಜೇಶ್ವರಿ ಗಾಯಕ್ವಾಡ್, ಶಿಖಾ ಪಾಂಡೆ, ಸುಕನ್ಯಾ, ಪೂಜಾ ವಸ್ತ್ರಕರ್ ಹಾಗೂ ದೀಪ್ತಿ ಶರ್ಮ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News