×
Ad

ಫುಟ್ಬಾಲ್ ಆಟಗಾರನಾಗಲಿರುವ ಬೋಲ್ಟ್

Update: 2018-02-27 23:55 IST

ಜಮೈಕಾ, ಫೆ.27: ಎಂಟು ಬಾರಿಯ ಒಲಿಂಪಿಕ್ ಚಾಂಪಿಯನ್, ‘ಓಟದ ರಾಜ’ ಎಂದೇ ಖ್ಯಾತಿ ಪಡೆದಿರುವ ಉಸೇನ್ ಬೋಲ್ಟ್ ವಿಶ್ವದ ಜನಪ್ರಿಯ ಕ್ರೀಡೆ ಫುಟ್ಬಾಲ್ ಆಡಲು ಸನ್ನದ್ದ್ಧರಾಗಿದ್ದು, ವಿಶ್ವದೆಲ್ಲೆಡೆಯ ಸೆಲೆಬ್ರಿಟಿಗಳು ಹಾಗೂ ಫುಟ್ಬಾಲ್ ಆಟಗಾರರಿರುವ ತಂಡದ ನಾಯಕತ್ವವಹಿಸಿಕೊಳ್ಳಲಿದ್ದಾರೆ.

‘‘ ವೃತ್ತಿಪರ ಫುಟ್ಬಾಲ್ ಆಟಗಾರನಾಗಬೇಕೆನ್ನುವುದು ನನ್ನ ಕನಸಾಗಿತ್ತು. ಫುಟ್ಬಾಲ್‌ನ ದಿಗ್ಗಜ ಆಟಗಾರರ ವಿರುದ್ಧ ಆಡುವುದು ನನ್ನ ಪಾಲಿಗೆ ಮಹತ್ವದ್ದಾಗಿದೆ. ಜೂ.10 ರಂದು ಓಲ್ಡ್ ಟ್ರಾಫೋರ್ಡ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸಾಕರ್ ರೈಡ್ ತಂಡದ ನಾಯಕತ್ವವಹಿಸಿಕೊಳ್ಳಲಿದ್ದೇನೆ’’ ಎಂದು ಬೋಲ್ಟ್ ಮಂಗಳವಾರ ಘೋಷಿಸಿದ್ದಾರೆ. ಯುನಿಸೆಫ್‌ಗಾಗಿ ನಡೆಯಲಿರುವ ಪಂದ್ಯದಲ್ಲಿ ಬ್ರಿಟನ್ ಗಾಯಕ ರಾಬ್ಬಿ ವಿಲಿಯಮ್ಸ್ ಇಂಗ್ಲೆಂಡ್ ತಂಡದ ನಾಯಕತ್ವವಹಿಸಿಕೊಳ್ಳಲಿದ್ದಾರೆ. ವಿಶ್ವದೆಲ್ಲೆಡೆಯಲ್ಲಿರುವ ಸಂಕಷ್ಟದಲ್ಲಿರುವ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಈ ಪಂದ್ಯ ಆಯೋಜಿಸಲಾಗಿದೆ. ಕಳೆದ ವರ್ಷ ಅಥ್ಲೆಟಿಕ್ಸ್‌ನಿಂದ ನಿವೃತ್ತಿಯಾದ ಬಳಿಕ ಬೋಲ್ಟ್ ಅವರು ತನ್ನ ವೃತ್ತಿಯನ್ನು ಬದಲಿಸುವ ಬಯಕೆ ವ್ಯಕ್ತಪಡಿಸಿದ್ದು ವೃತ್ತಿಪರ ಫುಟ್ಬಾಲ್ ಆಟಗಾರನಾಗುವುದು ನನ್ನ ದೊಡ್ಡ ಕನಸು. ಈ ಯೋಚನೆಯು ನನಗೆ ಭಯ ಮೂಡಿಸಿದೆ. ನನಗೆ ಈ ಪಂದ್ಯದಲ್ಲಿ ಹೊಂದಿಕೊಳ್ಳಲು ಸಮಯ ಬೇಕಾಗುತ್ತದೆ’’ ಎಂದು ಸಂದರ್ಶನವೊಂದರಲ್ಲಿ ಬೋಲ್ಟ್ ಹೇಳಿದ್ದಾರೆ.

  ಬೋಲ್ಟ್ 100 ಹಾಗೂ 200 ಮೀ. ಓಟದಲ್ಲಿ ಸತತ ಮೂರು ಒಲಿಂಪಿಕ್ ಗೇಮ್ಸ್‌ನಲ್ಲಿ ಚಿನ್ನ ಜಯಿಸಿದ ವಿಶ್ವದ ಏಕೈಕ ಓಟಗಾರನಾಗಿದ್ದಾರೆ. 100 ಮೀ. ದೂರವನ್ನು 9.58 ಸೆಕೆಂಡ್‌ನಲ್ಲಿ ಹಾಗೂ 200 ಮೀ. ದೂರವನ್ನು 19.19 ಸೆಕೆಂಡ್‌ನಲ್ಲಿ ಗುರಿ ತಲುಪಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. 2009ರಲ್ಲಿ ಬರ್ಲಿನ್‌ನಲ್ಲಿ ಈ ಎರಡು ವಿಶ್ವ ದಾಖಲೆ ನಿರ್ಮಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News