ಊರಿಗೆ ಮರಳಿದ ಯುವಕರಿಗೆ ರಾಜ್ಯ ಸರಕಾರ ಕೇರಳ ಮಾದರಿಯ ಯೋಜನೆ ರೂಪಿಸಲಿ

Update: 2018-03-04 09:17 GMT

ಈ ಬಾರಿಯ ಕರ್ನಾಟಕ ಸರಕಾರದ  ಬಜೆಟ್ ಅನಿವಾಸಿ ಕನ್ನಡಿಗರಿಗೆ ಅತ್ಯಂತ ನಿರಾಸೆ ತಂದಿದೆ. ಗಲ್ಫ್ ಕನ್ನಡಿಗರ ಸಮಸ್ಯೆಗಳು, ಕಷ್ಟ, ಉದ್ಯೋಗದ  ಅಸ್ಥಿರತೆ ಮತ್ತು ಇತರ ಹಲವಾರು ಬವಣೆಗಳ ಬಗ್ಗೆ ಈ ಮೊದಲಿನ ಯಾವುದೇ ಸರಕಾರ ಅಥವಾ ಜನಪ್ರತಿನಿಧಿಗಳು ಕ್ಯಾರೇ ಎಂದಿರಲಿಲ್ಲ. ಆದರೆ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ  ಅಧಿಕಾರಕ್ಕೆ ಬಂದ ಮೇಲೆ  ಈ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಿತ್ತು. ಕರಾವಳಿ ಕರ್ನಾಟಕದ ಸಚಿವರು, ಶಾಸಕರು ಅನಿವಾಸಿ ಕನ್ನಡಿಗರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು.

ತಣ್ಣಗೆ ಮಲಗಿದ್ದ ಕೆಎನ್ ಆರ್ ಐ ಫೋರಂಗೆ ಕಾಯಕಲ್ಪ ನೀಡಿ, ಗಲ್ಫ್ ರಾಷ್ಟ್ರ ಅದರಲ್ಲೂ ಯಎಇಯಲ್ಲಿ ಅದರ ಶಾಖೆ ಉದ್ಘಾಟಿಸಿ ನಿರೀಕ್ಷೆ ಹುಟ್ಟಿಸಿದ್ದರು. ಸಚಿವರು ಹಾಗು ಶಾಸಕರಿಗೆ ಕಾರ್ಮಿಕರ , ಶೋಷಿತರ ಸಮಸ್ಯೆಗಳ ನಿಜವಾದ ಅರಿವು ಇರುವುದರಿಂದ ಕರ್ನಾಟಕ ಸರಕಾರ ಅನಿವಾಸಿ ಕನ್ನಡಿಗರಿಗೆ ಬೇಕಾಗಿ ಹಲವಾರು ಯೋಜನೆಗಳನ್ನು ಘೋಷಿಸಿತ್ತು. ಗಲ್ಫ್ ನಲ್ಲಿ ದುಡಿಯುವ ಪ್ರವಾಸಿಗಳು ಆರ್ಥಿಕ ಸಂಕಷ್ಟದಿಂದ ತವರಿಗೆ ಮರಳಿದರೆ ಕೇರಳದ ಮಾದರಿಯಲ್ಲೇ ಸ್ವಉದ್ಯೋಗಕ್ಕೆ ಆರ್ಥಿಕ ಸಾಲ ನೀಡುವುದು ಹಾಗೂ ಅವರಿಗೆ ಉದ್ದಿಮೆ ಸ್ಥಾಪಿಸಲು ತರಬೇತಿ ನೀಡುವ ಮಹತ್ವದ ಯೋಜನೆಯನ್ನು ಮುಖ್ಯಮಂತ್ರಿ ಕಳೆದ ವರ್ಷ ಮಂಡಿಸಿದ ಬಜೆಟ್ ನಲ್ಲಿ ಘೋಷಿಸಿದ್ದರು. ಅದಕ್ಕೆ ಬೇಕಾಗಿ 50 ಕೋಟಿ ರೂಪಾಯಿಯನ್ನು ಮಂಜೂರು ಮಾಡಿಸಿದ್ದರು. ಆದರೆ ಈ ವರ್ಷದ ಬಜೆಟ್ ನಲ್ಲಿ ಅನಿವಾಸಿ ಭಾರತೀಯರ ಕುರಿತಾಗಿ ಒಂದೇ ಒಂದು ಸಾಲು ಸಹ ಇಲ್ಲ .

ಎನ್ ಆರ್ ಐ ಫೋರಂನ ಉಪಾಧ್ಯಕ್ಷರು ಯಾವುದೇ ಪ್ರಯೋಜನೆ ಇಲ್ಲದ ಪ್ರವಾಸ, ಅವೈಜ್ಞಾನಿಕ ಹೇಳಿಕೆಗಳಿಂದ ನಗೆಪಾಟಲಿಗೀಡಾಗುತ್ತಿದ್ದಾರೆ. ಇಷ್ಟೇ ಅಲ್ಲದೆ ಅನಿವಾಸಿ ಭಾರತೀಯರ ಗಾಯಕ್ಕೆ ಬರೆ ಎಳೆದಂತೆ ಕರ್ನಾಟಕ ಸರಕಾರದ ಸಚಿವರೊಬ್ಬರು ‘ಢೋಂಗಿ ಮಾಡಿ ಗಲ್ಫ್ ಗೆ ಹೋಗುತ್ತಾರೆ’ ಎಂದು ಹೇಳಿಕೆ ನೀಡಿದ್ದಾರೆ.

ಜೀವನೋಪಾಯಕ್ಕಾಗಿ  ಕಡಲು ದಾಟಿದ ಕನ್ನಡಿಗರು ತಮ್ಮ ಕುಟುಂಬದೊಂದಿಗೆ ರಾಜ್ಯದ ಆರ್ಥಿಕ, ಸಾಮಾಜಿಕ  ಸ್ಥಿತಿಯ ಉನ್ನತಿಗೂ  ಅಪಾರ  ಕೊಡುಗೆ ನೀಡಿದ್ದಾರೆ. ಗಲ್ಫ್ ರಾಷ್ಟ್ರದಲ್ಲಿನ ಹೊಸ ಕಾನೂನಿನಿಂದಾಗಿ ಕೆಲಸ ಕಳೆದುಕೊಂಡು ತಾಯ್ನಾಡಿಗೆ ಹಿಂತಿರುಗಿ ಬರುವಂತಹ ಲಕ್ಷಾಂತರ ಅನಿವಾಸಿ ಕನ್ನಡಿಗರ ಪುನರ್ವ್ಯವಸ್ಥೆಗೆ ಒಂದು ರೂ. ಕೂಡ 2017-18ರ ಬಜೆಟ್ ನಲ್ಲಿ ಮೀಸಲಿಡದಿರುವುದರಿಂದ ಅನಿವಾಸಿ ಕನ್ನಡಿಗರಿಗೆ ತೀವ್ರ ಅನ್ಯಾಯವಾಗಿದ .

ಹೀಗೆ ಹಿಂತಿರುಗಿದ 90 ಶೇ. ಜನರು ಆರ್ಥಿಕವಾಗಿ ಹಿಂದುಳಿದವರು. ಕಟ್ಟಡ  ಕಾರ್ಮಿಕರು, ಸೇಲ್ಸ್ ಮೆನ್ , ಡ್ರೈವರ್ , ಕುಕ್ ,ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದರು. ಕೇರಳದಲ್ಲಿ ಗಲ್ಫ್ ನಿಂದ ಹಿಂದಿರುಗಿದವರಿಗೆ ಪುನರ್ವಸತಿ ಯೋಜನೆಯನ್ನು ಸಮರೋಪಾದಿಯಲ್ಲಿ ಜಾ ಗೊಳಿಸಲಾಗುತ್ತಿದೆ. ಗಲ್ಫ್ ನಿಂದ ಹಿಂದಿರುಗಿದ ಕರ್ನಾಟಕದ ಯುವಕರಿಗೆ ಉದ್ಯೋಗ,  ಕೆಲಸ ಕಳೆದುಕೊಂಡು ಮಾನಸಿಕವಾಗಿ ಜರ್ಜರಿತರಾಗಿ ಹಿಂದಿರುಗಿದವರಿಗೆ ಕೌನ್ಸಲಿಂಗ್ ವ್ಯವಸ್ಥೆ  ಹಾಗು  ಅವರ ಎಲ್ಲ ವಿಧದ ಸಹಕಾರವನ್ನು ರಾಜ್ಯ ಸರಕಾರ ನೀಡಬೇಕು. ಈ ಬಗ್ಗೆ ಮುಖ್ಯಮಂತ್ರಿಗಳು ತಕ್ಷಣ ಸ್ವಂದಿಸಿ , ಅನಿವಾಸಿ ಭಾರತೀಯರಿಗೆ ನ್ಯಾಯ ಒದಗಿಸಬೇಕು.

Writer - ಸಲಾಂ ಬಾವ, ದುಬೈ

contributor

Editor - ಸಲಾಂ ಬಾವ, ದುಬೈ

contributor

Similar News