×
Ad

ಮಿನರ್ವ ಪಂಜಾಬ್ ಗೆ ಚೊಚ್ಚಲ ಐ-ಲೀಗ್ ಪ್ರಶಸ್ತಿ

Update: 2018-03-08 23:38 IST

ಗುರುಗಾಂವ್, ಮಾ.8: ಚರ್ಚಿಲ್ ಬ್ರದರ್ಸ್ ತಂಡವನ್ನು 1-0 ಗೋಲುಗಳ ಅಂತರದಿಂದ ಮಣಿಸಿ ಮೂರು ಅಂಕ ಗಳಿಸಿದ ಮಿನರ್ವ ಪಂಜಾಬ್ ತಂಡ ಮೊದಲ ಬಾರಿ ಐ-ಲೀಗ್ ಫುಟ್ಬಾಲ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಸತತ ಎರಡನೇ ಬಾರಿ ಐ-ಲೀಗ್ ಟ್ರೋಫಿ ಹೊಸ ತಂಡದ ಪಾಲಾಗಿದೆ. 2017ರಲ್ಲಿ ಐಝ್ವೋಲ್ ಎಫ್‌ಸಿ ತಂಡ ಮೋಹನ್ ಬಗಾನ್ ತಂಡವನ್ನು ಹಿಂದಿಕ್ಕಿ ಒಟ್ಟು 37 ಅಂಕ ಗಳಿಸುವ ಮೂಲಕ ಐ-ಲೀಗ್ ಜಯಿಸಿದ ಮೊದಲ ಈಶಾನ್ಯ ತಂಡ ಎನಿಸಿಕೊಂಡಿತ್ತು.

ಪಂಚಕುಲ ಮೂಲದ ಮಿನರ್ವ ತಂಡ ಗುರುವಾರ ಮೊದಲಾರ್ಧದ 16ನೇ ನಿಮಿಷದಲ್ಲಿ ವಿಲಿಯಮ್ ಒಪೊಕು ಬಾರಿಸಿದ ಏಕೈಕ ಗೋಲಿನ ನೆರವಿನಿಂದ 1-0 ಮುನ್ನಡೆ ಸಾಧಿಸಿತು. ಈ ಮುನ್ನಡೆಯನ್ನು ಕೊನೆಯ ತನಕ ಕಾಯ್ದುಕೊಂಡು ಪ್ರಶಸ್ತಿ ಎತ್ತಿ ಹಿಡಿಯಲು ಯಶಸ್ವಿಯಾಯಿತು. ಚರ್ಚಿಲ್ ಬ್ರದರ್ಸ್ ತಂಡ ದ್ವಿತೀಯಾರ್ಧದಲ್ಲಿ ಗೋಲು ಬಾರಿಸಲು ತೀವ್ರ ಪ್ರಯತ್ನ ನಡೆಸಿತು. ಆದರೆ, ಅದು ಹಲವು ಅವಕಾಶವನ್ನು ಕೈಚೆಲ್ಲಿತು. ಪಂದ್ಯ ಆರಂಭವಾಗುವ ಮೊದಲು ನಾಲ್ಕು ತಂಡಗಳು ಐ-ಲೀಗ್ ಪ್ರಶಸ್ತಿ ಎತ್ತಿಹಿಡಿಯುವ ಸ್ಪರ್ಧೆಯಲ್ಲಿದ್ದವು. ಚರ್ಚಿಲ್ ಬ್ರದರ್ಸ್ ತಂಡವನ್ನು ಮಣಿಸಿ ಮೂರಂಕವನ್ನು ಗಳಿಸಿದ ಪಂಜಾಬ್, ಐ-ಲೀಗ್ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದು ಪ್ರಶಸ್ತಿಗೆ ಅರ್ಹತೆ ಪಡೆಯಿತು. ಮಿನರ್ವ ಪಂಜಾಬ್ ಎರಡು ದಶಕಗಳ ಬಳಿಕ ಐ-ಲೀಗ್ ಪ್ರಶಸ್ತಿ ಜಯಿಸಿದ ಉತ್ತರ ಭಾರತದ ಮೊದಲ ತಂಡ ಎನಿಸಿಕೊಳ್ಳುವ ಮೂಲಕ ಇತಿಹಾಸ ನಿರ್ಮಿಸಿತು. 1996-97ರಲ್ಲಿ ಜೆಸಿಟಿ ತಂಡ ಚೊಚ್ಚಲ ನ್ಯಾಶನಲ್ ಫುಟ್ಬಾಲ್ ಲೀಗ್ ಪ್ರಶಸ್ತಿ ಜಯಿಸಿತ್ತು.

 ಮಿನರ್ವ ತಂಡ 17 ಪಂದ್ಯಗಳಲ್ಲಿ 32 ಅಂಕ ಗಳಿಸುವ ಮೂಲಕ ಅಂತಿಮ ದಿನದ ಪಂದ್ಯಕ್ಕೆ ಆಡಲು ಸಜ್ಜಾಗಿತ್ತು. ನೆರೊಕ(32), ಈಸ್ಟ್ ಬಂಗಾಳ(30) ಹಾಗೂ ಮೋಹನ್ ಬಗಾನ್(30) ಮಿನರ್ವ ತಂಡಕ್ಕೆ ಪ್ರತಿಸ್ಪರ್ಧಿಯಾಗಿದ್ದವು. ಐ-ಲೀಗ್ ಪ್ರಶಸ್ತಿ ಜಯಿಸಿದ ಮಿನರ್ವ ತಂಡಕ್ಕೆ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ಅಧ್ಯಕ್ಷ ಪ್ರಫುಲ್ ಪಟೇಲ್ ಅಭಿನಂದನೆ ಸಲ್ಲಿಸಿದ್ದಾರೆ. ‘‘ಐ-ಲೀಗ್ ಪ್ರಶಸ್ತಿ ಜಯಿಸಿ ಮುಂದಿನ ವರ್ಷದ ಎಸಿಎಲ್ ಕ್ವಾಲಿಫೈಯರ್‌ನಲ್ಲಿ ಸ್ಥಾನ ಪಡೆದ ಮಿನರ್ವ ತಂಡಕ್ಕೆ ಅಭಿನಂದನೆ. ಲೀಗ್ ತುಂಬಾ ಸ್ಪರ್ಧಾತ್ಮಕ ಹಾಗೂ ರೋಚಕವಾಗಿತ್ತು. ಅಂತಿಮ ದಿನದಲ್ಲಿ ನಾಲ್ಕು ತಂಡಗಳಿಗೆ ಪ್ರಶಸ್ತಿ ಗೆಲ್ಲುವ ಅವಕಾಶವಿರುವುದನ್ನು ನೋಡಲು ಖುಷಿಯಾಯಿತು’’ ಎಂದು ಪಟೇಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News