×
Ad

ಪೂನಿಯಾಗೆ ಡೋಪಿಂಗ್ ಪರೀಕ್ಷೆ

Update: 2018-03-08 23:39 IST

ಪಟಿಯಾಲ, ಮಾ.8: ಆಸ್ಟ್ರೇಲಿಯದಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್ ಗೆ ಅರ್ಹತೆ ಗಿಟ್ಟಿಸಿಕೊಂಡಿರುವ ಭಾರತದ ಡಿಸ್ಕಸ್ ಎಸೆತಗಾರ್ತಿ ಸೀಮಾ ಪೂನಿಯಾ ರಾಷ್ಟ್ರೀಯ ಉದ್ದೀಪನಾ ಮದ್ದು ನಿಗ್ರಹ ಘಟಕ(ನಾಡಾ)ದಿಂದ ಪರೀಕ್ಷೆಗೆ ಒಳಗಾಗಿದ್ದಾರೆ. ಪೂನಿಯಾ 22ನೇ ಆವೃತ್ತಿಯ ಫೆಡರೇಶನ್ ಕಪ್ ನ್ಯಾಶನಲ್ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ವೇಳೆ ಡೋಪಿಂಗ್ ಪರೀಕ್ಷೆಗೆ ಒಳಗಾಗಿರಲಿಲ್ಲ. ಚಾಂಪಿಯನ್‌ಶಿಪ್‌ನ ಮೊದಲ ದಿನವಾದ ಮಾ.5 ರಂದು ಪೂನಿಯಾ 61.05 ಮೀ.ದೂರ ಡಿಸ್ಕಸ್‌ನ್ನು ಎಸೆಯುವುದರೊಂದಿಗೆ ಚಿನ್ನ ಜಯಿಸಿದ್ದರು. ಆ ದಿನ ನಾಡಾ ಅಧಿಕಾರಿಗಳು ಲಭ್ಯವಿರದ ಕಾರಣ ಡೋಪಿಂಗ್ ಟೆಸ್ಟ್‌ಗೆ ಒಳಪಟ್ಟಿರಲಿಲ್ಲ.

ನಾಡಾ ಅಧಿಕಾರಿಗಳು ಮಾ.6 ರಂದು ಪಟಿಯಾಲಕ್ಕೆ ಬಂದಿದ್ದರು. ಆಗ ಪೂನಿಯಾ ಮನೆಯಲ್ಲಿರಲಿಲ್ಲ. ಭಾರತದ ಅಥ್ಲೆಟಿಕ್ಸ್ ಫೆಡರೇಶನ್(ಎಎಫ್‌ಐ) ನೆರವಿನಿಂದ ಸೋನಿಪತ್‌ಗೆ ತೆರಳಿದ ನಾಡಾ ಅಧಿಕಾರಿಗಳು ಸೀಮಾ ಪೂನಿಯಾರಿಂದ ಮೂತ್ರ ಮಾದರಿ ಸಂಗ್ರಹಿಸಿದ್ದರು.

ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಜಯಿಸಿರುವ ಪೂನಿಯಾ ಕಾಮನ್‌ವೆಲ್ತ್ ಗೇಮ್ಸ್ ಗೆ ಅರ್ಹತೆ ಪಡೆದಿದ್ದಾರೆ. ಎರಡು ವರ್ಷಗಳ ಬಳಿಕ ಮೊದಲ ಬಾರಿ ಪೂನಿಯಾ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದರು.

34ರ ಹರೆಯದ ಹರ್ಯಾಣದ ಅಥ್ಲೀಟ್ ಪೂನಿಯಾ 2006ರಿಂದ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಸತತವಾಗಿ ಭಾಗವಹಿಸುತ್ತಿದ್ದಾರೆ. 2006ರ ಮೆಲ್ಬೋರ್ನ್ ಗೇಮ್ಸ್‌ನಲ್ಲಿ ಬೆಳ್ಳಿ(60.56 ಮೀ.) ಜಯಿಸಿದ್ದ ಪೂನಿಯಾ 2010ರ ದಿಲ್ಲಿ ಗೇಮ್ಸ್‌ನಲ್ಲಿ ಕಂಚು ಹಾಗೂ 2014ರ ಗ್ಲಾಸ್ಗೊ ಗೇಮ್ಸ್‌ನಲ್ಲಿ ಬೆಳ್ಳಿ ಜಯಿಸಿದ್ದಾರೆ.

   ಚಾಂಪಿಯನ್‌ಶಿಪ್‌ನ ಮೊದಲ ದಿನ ತನ್ನದೇ ರಾಷ್ಟ್ರೀಯ ದಾಖಲೆ ಮುರಿದ ಪೋಲ್ ವಾಲ್ಟರ್ ಸುಬ್ರಮಣಿ ಶಿವಾ ಸ್ಪರ್ಧೆಯ ಮರುದಿನ ಡೋಪಿಂಗ್ ಪರೀಕ್ಷೆಗೆ ಒಳಗಾಗಿದ್ದರು. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾಗವಹಿಸಲಿರುವ ಭಾರತದ ಅಥ್ಲೀಟ್‌ಗಳು ಆಸ್ಟ್ರೇಲಿಯಕ್ಕೆ ತೆರಳುವ ಮೊದಲು ಪರೀಕ್ಷೆಗೆ ಒಳಗಾಗುವ ಸಾಧ್ಯತೆಯಿಲ್ಲ. ಚಿನ್ನ ಹಾಗೂ ಬೆಳ್ಳಿ ವಿಜೇತ ಅಥ್ಲೀಟ್‌ಗಳು ಚಾಂಪಿಯನ್‌ಶಿಪ್ ನಡೆಯುತ್ತಿರುವಾಗಲೇ ತಮ್ಮ ಸ್ಯಾಂಪಲ್‌ನ್ನು ನೀಡಿದ್ದಾರೆ. ಎಎಫ್‌ಐ ಆಯ್ಕೆ ಸಮಿತಿಯು ತಂಡವನ್ನು ಆಯ್ಕೆ ಮಾಡಲಿದ್ದು, ಸರಕಾರದೊಂದಿಗೆ ಎಲ್ಲ ಔಪಚಾರಿಕತೆ ಮುಗಿದ ಬಳಿಕ ಶುಕ್ರವಾರ ತಂಡವನ್ನು ಘೋಷಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News