ಜಿಎಸ್‌ಟಿಆರ್- 3ಬಿ : ಅಂತಿಮ ದಿನಾಂಕ ಜೂನ್‌ವರೆಗೆ ವಿಸ್ತರಣೆ
Update: 2018-03-10 20:12 IST
ಹೊಸದಿಲ್ಲಿ, ಮಾ.10: ವ್ಯಾಪಾರಸ್ತರು ಮಾರಾಟದ ವಿವರ ಜಿಎಸ್‌ಟಿಆರ್-3ಬಿ ಸಲ್ಲಿಸುವ ಅಂತಿಮ ದಿನಾಂಕವನ್ನು ಜೂನ್‌ವರೆಗೆ ವಿಸ್ತರಿಸಲಾಗಿದೆ ಎಂದು ಜಿಎಸ್‌ಟಿ ಸಮಿತಿ ತಿಳಿಸಿದೆ.
ಹೊಸದಿಲ್ಲಿಯಲ್ಲಿ ನಡೆದ ಜಿಎಸ್‌ಟಿ ಸಮಿತಿ ಸಭೆಯ ಬಳಿಕ ಸುದ್ದಿಗಾರರಿಗೆ ವಿವರ ನೀಡಿದ ವಿತ್ತ ಸಚಿವ ಅರುಣ್ ಜೇಟ್ಲಿ, ರಾಜ್ಯಗಳ ನಡುವೆ ಸರಕು ಸಾಗಾಟ ನಡೆಸಲು ಅಗತ್ಯವಿರುವ ಇ-ವೇ ಬಿಲ್ (ಇಲೆಕ್ಟ್ರಾನಿಕ್ ವೇ ಬಿಲ್) ವ್ಯವಸ್ಥೆಯನ್ನು ಹಂತ ಹಂತವಾಗಿ ಎಪ್ರಿಲ್ 1ರಿಂದ ಜಾರಿಗೊಳಿಸಲಾಗುವುದು . ಅಲ್ಲದೆ ರಫ್ತುದಾರರಿಗೆ ತೆರಿಗೆ ವಿನಾಯಿತಿ ಸೌಲಭ್ಯವನ್ನು ಆರು ತಿಂಗಳು ವಿಸ್ತರಿಸಲಾಗಿದೆ ಎಂದು ತಿಳಿಸಿದರು.
ಜಿಎಸ್‌ಟಿ ವಿವರ ಫೈಲ್ ಮಾಡುವ ಸರಳೀಕೃತ ಫಾರ್ಮ್ ಬಗ್ಗೆ ಸಭೆಯಲ್ಲಿ ಯಾವುದೇ ನಿರ್ಧಾರಕ್ಕೆ ಬರಲಾಗಿಲ್ಲ. ಸರಳೀಕೃತ ಹಾಗೂ ತಪ್ಪಿಸಿಕೊಳ್ಳಲು ಆಸ್ಪದವಿಲ್ಲದ ರೀತಿಯ ಜಿಎಸ್‌ಟಿ ಫಾರ್ಮ್ ರೂಪಿಸುವ ಕಾರ್ಯವನ್ನು ಸುಶೀಲ್ ಮೋದಿ ನೇತೃತ್ವದ ಸಚಿವರ ಸಮಿತಿಗೆ ವಹಿಸಲಾಗಿದೆ ಎಂದು ಜೇಟ್ಲಿ ವಿವರಿಸಿದರು.