ರಾಮಸೇತುಗೆ ಹಾನಿ ಮಾಡೆವು: ಸುಪ್ರೀಂಗೆ ಕೇಂದ್ರ ಸ್ಪಷ್ಟನೆ
ಹೊಸದಿಲ್ಲಿ,ಮಾ.16: ದೇಶದ ಹಿತಾಸಕ್ತಿಯ ದೃಷ್ಟಿಯಿಂದ ತನ್ನ ಪ್ರಸ್ತಾವಿತ ಸೇತುಸಮುದ್ರ ಹಡಗುಕಾಲುವೆ ಯೋಜನೆಗಾಗಿ ಪೌರಾಣಿಕ ಹಿನ್ನೆಲೆಯಲ್ಲಿ ರಾಮಸೇತುವಿಗೆ ಹಾನಿ ಮಾಡುವುದಿಲ್ಲವೆಂದು ಕೇಂದ್ರ ಸರಕಾರವು ಶುಕ್ರವಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.
ತನ್ನ ಈ ನಿಲುವನ್ನು ಪರಿಗಣನೆಗೆ ತೆಗೆದುಕೊಳ್ಳುವ ಮೂಲಕ, ಸೇತುಸಮುದ್ರಂ ಯೋಜನೆಯ ವಿರುದ್ಧ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ವಿರುದ್ಧ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಇತ್ಯರ್ಥಗೊಳಿಸಬಹುದಾಗಿದೆಯೆಂದು ಕೇಂದ್ರ ಹಡಗುಗಾರಿಕೆ ಸಚಿವಾಲಯವು ತನ್ನ ಅಫಿದಾವಿತ್‌ನಲ್ಲಿ ತಿಳಿಸಿದೆ.
ದೇಶದ ಹಿತಾಸಕ್ತಿಯ ದೃಷ್ಟಿಯಿಂದ ಆ್ಯಡಮ್ಸ್ ಸೇತುವೆ/ರಾಮಸೇತುವೆಗೆ ಯಾವುದೇ ಪರಿಣಾಮವಾಗದಂತೆ ಅಥವಾ ಅದಕ್ಕೆ ಹಾನಿಮಾಡದಂತೆ ಹಿಂದಿನ ಸೇತುಸಮುದ್ರಂ ಹಡಗುಕಾಲುವೆ ಯೋಜನೆಗೆ ಪರ್ಯಾಯ ವ್ಯವಸ್ಥೆಯನ್ನು ಕಂಡುಹಿಡಿಯಲು ಕೇಂದ್ರ ಸರಕಾರ ಬಯಸಿದೆ ಎಂದು ಸಚಿವಾಲಯವು ತನ್ನ ಅಫಿದಾವಿತ್‌ನಲ್ಲಿ ತಿಳಿಸಿದೆ.
ರಾಮಸೇತುವಿನಲ್ಲಿ ಹೂಳೆತ್ತುವುದರಿಂದ ಸಾಮಾಜಿಕ ಆರ್ಥಿಕ ಅನಾನುಕೂಲಗಳಿವೆ ಹಾಗೂ ದೇಶದ ಹಿತಾಸಕ್ತಿಗೆ ಅದು ಪೂರಕವಾಗಿಲ್ಲವೆಂದು ಅಫಿದಾವಿತ್ ತಿಳಿಸಿದೆ.
ಕೇಂದ್ರ ಸರಕಾರವಾದ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿಂಕಿ ಆನಂದ್ ಅವರು, ಸುಪ್ರೀಂಕೋರ್ಟ್ ರಾಮಸೇತುವೆ ಯೋಜನೆ ಬಗ್ಗೆ ಈ ಮೊದಲು ನೀಡಿದ ಸೂಚನೆಗಳಿಗೆ ಅನುಗುಣವಾಗಿ ಕೇಂದ್ರ ಸರಕಾರವು ತನ್ನ ಪ್ರತಿಕ್ರಿಯೆಯನ್ನು ಸಲ್ಲಿಸಿದೆ. ಹಡಗುಗಾಲುವೆ ಯೋಜನೆಯ ವಿರುದ್ಧ ಸುಬ್ರಮಣಿಯನ್ ಸ್ವಾಮಿ ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಸಲ್ಲಿಸಿದ್ದರು ಹಾಗೂ ಪೌರಾಣಿಕ ಹಿನ್ನೆಲೆಯ ರಾಮಸೇತುವಿಗೆ ಯಾವುದೇ ರೀತಿಯಲ್ಲಿ ಹಾನಿಮಾಡದಂತೆ ಕೇಂದ್ರಕ್ಕೆ ಆದೇಶ ನೀಡಬೇಕೆಂದು ಅವರು ನ್ಯಾಯಾಲಯವನ್ನು ಕೋರಿದ್ದರು.