ನಿಷೇಧ ವಿರುದ್ಧ ರಬಾಡ ಮೇಲ್ಮನವಿ: 19ಕ್ಕೆ ವಿಚಾರಣೆ
ಕೇಪ್‌ಟೌನ್, ಮಾ.16: ಐಸಿಸಿ ನೀತಿ ಸಂಹಿತೆ ಲೆವೆಲ್-2ನ್ನು ಉಲ್ಲಂಘಿಸಿ 2 ಟೆಸ್ಟ್ ಪಂದ್ಯಗಳಿಂದ ನಿಷೇಧ ಎದುರಿಸುತ್ತಿರುವ ದಕ್ಷಿಣ ಆಫ್ರಿಕದ ವೇಗದ ಬೌಲರ್ ಕಾಗಿಸೊ ರಬಾಡ ಸಲ್ಲಿಸಿರುವ ಮೇಲ್ಮನವಿ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಲು ಐಸಿಸಿ ನಿರ್ಧರಿಸಿದೆ.
ರಬಾಡ ಈಗ ನಡೆಯುತ್ತಿರುವ ಆಸ್ಟ್ರೇಲಿಯ ವಿರುದ್ಧದ 4 ಪಂದ್ಯಗಳ ಸರಣಿಯ ಉಳಿದೆರಡು ಪಂದ್ಯಗಳಲ್ಲಿ ಆಡಲು ಅನರ್ಹರಾಗಿದ್ದಾರೆ.
ನ್ಯೂಝಿಲೆಂಡ್‌ನ ಮೈಕಲ್ ಹೆರಾನ್ ವಿಚಾರಣೆಯ ನ್ಯಾಯಾಂಗ ಆಯುಕ್ತರಾಗಿ ನೇಮಕಗೊಂಡಿದ್ದಾರೆ. ವೀಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಯಲಿದೆ. ಹೆರಾನ್ ವಿಚಾರಣೆ ನಡೆದು 48 ಗಂಟೆಗಳಲ್ಲಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಐಸಿಸಿ ತಿಳಿಸಿದೆ.
ಪೋರ್ಟ್ ಎಲಿಝಬೆತ್‌ನಲ್ಲಿ ನಡೆದ ದ್ವಿತೀಯ ಟೆಸ್ಟ್‌ನ ಮೊದಲ ದಿನ ಆಸ್ಟ್ರೇಲಿಯದ ನಾಯಕ ಸ್ಟೀವ್ ಸ್ಮಿತ್ ಭುಜಕ್ಕೆ ಉದ್ದೇಶಪೂರ್ವಕವಾಗಿ ಢಿಕ್ಕಿಯಾಗಿದ್ದ ರಬಾಡಗೆ ಮ್ಯಾಚ್ ರೆಫರಿ ಜೆಪ್ ಕ್ರೋವ್ 3 ಡಿಮೆರಿಟ್ ಅಂಕ ಹಾಗೂ ಪಂದ್ಯಶುಲ್ಕದಲ್ಲಿ ಶೇ.50ರಷ್ಟು ದಂಡ ವಿಧಿಸಿದ್ದಾರೆ.
ಒಟ್ಟು 8 ಡಿಮೆರಿಟ್ ಅಂಕ ಪಡೆದಿರುವ ರಬಾಡ ಎರಡು ಪಂದ್ಯಗಳಿಂದ ನಿಷೇಧಕ್ಕೆ ಒಳಗಾಗಿದ್ದಾರೆ.