ಪ್ರಾರ್ಥನಾ ಮಂದಿರಗಳಲ್ಲಿ ಶಸ್ತ್ರಾಸ್ತ್ರ ತರಬೇತಿ ನಿಷೇಧ : ಕೇರಳ ಸರಕಾರ ಚಿಂತನೆ
ತಿರುವನಂತಪುರಂ, ಮಾ.21: ಪ್ರಾರ್ಥನಾ ಮಂದಿರಗಳಲ್ಲಿ ಶಸ್ತ್ರಾಸ್ತ್ರ ತರಬೇತಿಯನ್ನು ನಿಷೇಧಿಸುವ ಹೊಸ ಕಾನೂನು ಜಾರಿಗೊಳಿಸುವ ಬಗ್ಗೆ ಸರಕಾರ ಚಿಂತನೆ ನಡೆಸಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ಆರೆಸ್ಸೆಸ್ ಮತ್ತು ಪಿಎಫ್‌ಐ(ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯ) ಸಂಘಟನೆಗಳು ಪ್ರಾರ್ಥನಾ ಮಂದಿರಗಳಲ್ಲಿ ಶಸ್ತ್ರಾಸ್ತ್ರ ತರಬೇತಿ ನೀಡುವ ಕಾರ್ಯದಲ್ಲಿ ತೊಡಗಿವೆ ಎಂದು ಆರೋಪಿಸಿದರು.
ಶೈಕ್ಷಣಿಕ ಸಂಸ್ಥೆಗಳಿಗೆ ಸೇರಿದ ಹಾಗೂ ಖಾಸಗಿ ಜಮೀನನ್ನು ಬಲವಂತವಾಗಿ ವಶಪಡಿಸಿಕೊಂಡು ಅಲ್ಲಿ ಶಸ್ತ್ರಾಸ್ತ್ರ ತರಬೇತಿ ನೀಡಲಾಗುತ್ತದೆ . ರಾಜ್ಯ ಸರಕಾರದ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಪ್ರಾರ್ಥನಾ ಮಂದಿರಗಳು ಪ್ರಾರ್ಥನೆ ಸಲ್ಲಿಸಲು ಮಾತ್ರ ಬಳಕೆಯಾಗಬೇಕು. ಅಗತ್ಯಬಿದ್ದರೆ ಹೊಸ ಕಾನೂನು ಜಾರಿಗೆ ತಂದು ಇಂತಹ ಕಾರ್ಯಗಳನ್ನು ಸರಕಾರ ನಿಷೇಧಿಸಲಿದೆ ಎಂದರು. ಇಂತಹ ತರಬೇತಿ ಕೇಂದ್ರಗಳ ಬಗ್ಗೆ ಮಾಹಿತಿ ನೀಡುವ ಮಾಹಿತಿದಾರರ ಹೆಸರನ್ನು ಬಹಿರಂಗಗೊಳಿಸುವ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪೊಲೀಸರಿಗೆ ಮಾಹಿತಿ ನೀಡುವವರ ರಕ್ಷಣೆಗೆ ಎಲ್ಲಾ ಕ್ರಮಗಳನ್ನೂ ಸರಕಾರ ಕೈಗೊಂಡಿದೆ ಎಂದು ಮುಖ್ಯಮಂತ್ರಿ ವಿಜಯನ್ ತಿಳಿಸಿದರು.