ನೋಟು ನಿಷೇಧದಿಂದ ತೆರಿಗೆ ಭಯೋತ್ಪಾದನೆ: ಯಶವಂತ್ ಸಿನ್ಹಾ ಟೀಕೆ

Update: 2018-03-21 14:45 GMT

ಹೊಸದಿಲ್ಲಿ,ಮಾ.21: ನೋಟು ನಿಷೇಧವು ತೆರಿಗೆ ಭಯೋತ್ಪಾದನೆಗೆ ಕಾರಣವಾಗಿದೆ ಎಂದು ಬುಧವಾರ ಇಲ್ಲಿ ಹೇಳಿದ ಭಿನ್ನಮತೀಯ ಬಿಜೆಪಿ ನಾಯಕ ಹಾಗೂ ಮಾಜಿ ಕೇಂದ್ರ ವಿತ್ತಸಚಿವ ಯಶವಂತ್ ಸಿನ್ಹಾ ಅವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ತನ್ನ ತಿಕ್ಕಲುತನದ ನಿರ್ಧಾರಗಳಿಗಾಗಿ ಕುಖ್ಯಾತಿ ಪಡೆದಿದ್ದ ಮಧ್ಯಕಾಲೀನ ಯುಗದ ದಿಲ್ಲಿಯ ದೊರೆಯೋರ್ವನಿಗೆ ಹೋಲಿಸಿದರು.

    ನೋಟು ನಿಷೇಧ ಕ್ರಮದ ಟೀಕಾಕಾರರಾಗಿರುವ ಆರ್ಥಿಕ ತಜ್ಞ ಅರುಣ್ ಕುಮಾರ್ ಅವರ ‘ನೋಟು ನಿಷೇಧ ಮತ್ತು ಕಪ್ಪುಹಣ’ ಪುಸ್ತಕದ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಸಿನ್ಹಾ, ತನ್ನ ಘೋಷಿತ ಗುರಿಗಳನ್ನು ಸಾಧಿಸುವಲ್ಲಿ ನೋಟು ನಿಷೇಧ ಕ್ರಮವು ವಿಫಲ ಗೊಂಡಿದೆಯಾದರೂ, ಅದು ಯಶಸ್ವಿಗೊಂಡಿದೆ ಎಂಬ ಭ್ರಮೆಯನ್ನು ಜನರಲ್ಲಿ ಮೂಡಿಸುವಲ್ಲಿ ಸರಕಾರವು ಗೆದ್ದಿದೆ ಎಂದರು.

ಏನನ್ನು ಮಾಡಬೇಕು ಎನ್ನುವುದನ್ನು ನೀತಿ ನಿರೂಪಕರ ತಂಡವು ನಿರ್ಧರಿಸುವುದಿಲ್ಲ, ಒಬ್ಬರೇ ನೀತಿ ನಿರೂಪಕರು ನಿರ್ಧರಿಸುತ್ತಿದ್ದಾರೆ ಎಂದು ಮೋದಿಯವರನ್ನು ಅಣಕವಾಡಿದ ಅವರು, ಕಾಲಕ್ರಮೇಣ ನೋಟು ನಿಷೇಧವು ಸಂಪೂರ್ಣವಾಗಿ ವಿಫಲಗೊಂಡಿದೆ ಎಂಬ ಏಕೈಕ ನಿರ್ಧಾರಕ್ಕೆ ಸರಕಾರವು ಬರಲಿದೆ ಎಂದರು.

16ನೇ ಶತಮಾನದಲ್ಲಿ ತನ್ನ ರಾಜಧಾನಿಯನ್ನು ದಿಲ್ಲಿಯಿಂದ ದೌಲತಾಬಾದ್‌ಗೆ ಸ್ಥಳಾಂತರಿಸುವ ನಿರ್ಧಾರಕ್ಕಾಗಿ ಕುಖ್ಯಾತಿಯನ್ನು ಪಡೆದಿದ್ದ ದೊರೆಯಿದ್ದ. ಆದರೆ ಆತ ತನ್ನ ಕಾಲದಲ್ಲಿ ಕರೆನ್ಸಿಯ ಅಪಮೌಲ್ಯೀಕರಣವನ್ನೂ ಮಾಡಿದ್ದ ಎನ್ನುವುದನ್ನು ನಾವು ಮರೆತಿದ್ದೇವೆ. ಆ ದೊರೆ ಮಾಡಿದ್ದ ತಪ್ಪನ್ನು ಪುನರಾವರ್ತಿಸಲು ನಾವು ಐದು ಶತಮಾನ ಹಿಂದೆ ಹೋಗಿದ್ದೇವೆ ಎಂದು ಸಿನ್ಹಾ ಹೇಳಿದರು. ಮೋದಿಯವರನ್ನು ಮುಹಮ್ಮದ್ ಬಿನ್ ತುಘಲಕ್‌ಗೆ ಹೋಲಿಸುತ್ತಿದ್ದೀರಾ ಎಂಬ ಕಾರ್ಯಕ್ರಮದ ನಿರೂಪಕರ ಪ್ರಶ್ನೆಗೆ ಸಿನ್ಹಾ, ತಾನು ಯಾವುದೇ ಹೆಸರುಗಳನ್ನು ಪ್ರಸ್ತಾಪಿಸುತ್ತಿಲ್ಲ ಎಂದು ಉತ್ತರಿಸಿದರು.

ಬಿಜೆಪಿಯು ಪ್ರತಿಪಕ್ಷದ ಸ್ಥಾನದಲ್ಲಿದ್ದಾಗ ತೆರಿಗೆ ಭಯೋತ್ಪಾದನೆಯನ್ನು ಟೀಕಿಸುತ್ತಿತ್ತು ಮತ್ತು ನೋಟು ನಿಷೇಧದ ಬಳಿಕ ಅದು ಮತ್ತೆ ಹಿಂದಿರುಗಿದೆ ಎಂದ ಅವರು, ನೋಟು ನಿಷೇಧ ನಿರ್ಧಾರದ ಬಳಿಕ ಆದಾಯ ತೆರಿಗೆ ಇಲಾಖೆಯು 18 ಲಕ್ಷ ಪ್ರಕರಣಗಳನ್ನು ದಾಖಲಿಸಿಕೊಂಡಿದೆ ಮತ್ತು ಸದ್ಯೋಭವಿಷ್ಯದಲ್ಲಿ ಅವುಗಳ ತನಿಖೆ ನಡೆಸಲು ಯಾವುದೇ ಪರ್ಯಾಪ್ತ ಮಾರ್ಗಗಳು ಅದರ ಬಳಿಯಲ್ಲಿಲ್ಲ. ಈ ಎಲ್ಲ ಪ್ರಕರಣಗಳ ತನಿಖೆಯು ಪೂರ್ಣಗೊಳ್ಳುವವರೆಗೆ ಎಷ್ಟು ಕಪ್ಪುಹಣವನ್ನು ವಶಪಡಿಸಿಕೊಳ್ಳಲಾಗಿದೆ ಎನ್ನುವುದು ಎಂದೂ ಜನರಿಗೆ ಗೊತ್ತಾಗುವುದಿಲ್ಲ. ಆರ್‌ಬಿಐನಿಂದ ನಿಷೇಧಿತ ನೋಟುಗಳ ಎಣಿಕೆಯಂತೆ ಇದು ಮುಂದುವರಿಯಲಿದೆ. ಅದು ಎಂದಿಗೂ ಮುಗಿಯುವುದಿಲ್ಲ, ನೋಟು ನಿಷೇಧವು ಯಶಸ್ವಿಯಾಗಿದೆ ಎಂಬ ಭ್ರಮೆಯನ್ನು ಜೀವಂತವಾಗಿರಿಸಲು ಕನಿಷ್ಠ ಮುಂದಿನ ಲೋಕಸಭಾ ಚುನಾವಣೆಯವರೆಗೆ ಅದು ಮುಗಿಯುವುದಿಲ್ಲ ಎಂದರು.

ನೀವಾದರೆ ಕಪ್ಪುಹಣದ ಹರಿವನ್ನು ಹೇಗೆ ತಡೆಯುತ್ತೀದ್ದೀರಿ ಎಂಬ ಪ್ರಶ್ನೆಗೆ ಸಿನ್ಹಾ, ಕೆಲಸಗಳನ್ನು ಹೇಗೆ ಮಾಡಬಾರದು ಎಂಬ ಬಗ್ಗೆ ಪುಸ್ತಕಗಳನ್ನು ಬರೆಯಲು ನೋಟು ನಿಷೇಧ ಮತ್ತು ಜಿಎಸ್‌ಟಿ ಉತ್ತಮ ವಿಷಯಗಳಾಗಿವೆ ಎಂದು ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News