ಭ್ರಷ್ಟಾಚಾರ ಆರೋಪ: 2,001 ಬಿಎಂಸಿ ನೌಕರರ ವಿರುದ್ಧ ತನಿಖೆಗೆ ಮಹಾರಾಷ್ಟ್ರ ಸರಕಾರದ ಆದೇಶ

Update: 2018-03-25 16:31 GMT

 ಮುಂಬೈ,ಮಾ.25: ಭ್ರಷ್ಟಾಚಾರದ ಆರೋಪಗಳನ್ನು ಹೊಂದಿರುವ ಬೃಹನ್ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ)ಯ 261 ವಿವಿಧ ಇಲಾಖೆಗಳಲ್ಲಿಯ 2,001 ಸಿಬ್ಬಂದಿ ಮತ್ತು ಅಧಿಕಾರಿಗಳ ವಿರುದ್ಧ ತನಿಖೆಗಳನ್ನು ಕೈಗೊಳ್ಳುವಂತೆ ಮಹಾರಾಷ್ಟ್ರ ಸರಕಾರವು ಬಿಎಂಸಿಗೆ ಲಿಖಿತ ಆದೇಶವನ್ನು ನೀಡಿದೆ.

ಸುಮಾರು 1,000 ಅಧಿಕಾರಿಗಳ ವಿರುದ್ಧದ ತನಿಖೆಯು ಪೂರ್ಣಗೊಳ್ಳದಂತಾಗಲು ಅವರಿಗೆ ಸಂಬಂಧಿಸಿದ ಕಡತಗಳನ್ನು ನಾಪತ್ತೆ ಮಾಡಲಾಗಿದೆ ಎಂದು ದೂರಿಕೊಂಡು ಬಿಎಂಸಿಯ ಕಾರ್ಪೊರೇಟರ್‌ಗಳು ಸರಕಾರಕ್ಕೆ ಪತ್ರ ಬರೆದಿದ್ದರು ಎಂದು ತಿಳಿಸಿದ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಯೋರ್ವರು, ಆದರೆ ಈ ಬಗ್ಗೆ ವಿವರಣೆಯನ್ನು ಕೋರಿದಾಗ ಯಾವುದೇ ಕಡತ ನಾಪತ್ತೆಯಾಗಿಲ್ಲ ಎಂದು ಬಿಎಂಸಿ ನಮಗೆ ತಿಳಿಸಿದೆ ಎಂದರು.

ತನಿಖೆಯಲ್ಲಿ ವಿಳಂಬವನ್ನು ಗಂಭಿರವಾಗಿ ಪರಿಗಣಿಸುವಂತೆ ಮತ್ತು ಸಾಧ್ಯವಾದಷ್ಟು ಶೀಘ್ರ ಅದನ್ನು ಪೂರ್ಣಗೊಳಿಸಲು ಬಿಎಂಸಿಗೆ ಸೂಚಿಸುವಂತೆ ಕಾರ್ಪೊರೇಟರ್‌ಗಳು ಸರಕಾರವನ್ನು ಒತ್ತಾಯಿಸಿದ್ದರು ಎಂದರು.

ಸರಕಾರದ ನಿರ್ದೇಶದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ಪ್ರತಿಪಕ್ಷ ಕಾಂಗ್ರೆಸ್‌ನ ವಕ್ತಾರರು, ಬಿಎಂಸಿ ಭ್ರಷ್ಟಾಚಾರದ ಕೂಪವಾಗಿದೆ ಎನ್ನುವುದು ಇಡೀ ದೇಶಕ್ಕೆ ಗೊತ್ತಿದೆ. ಇದಕ್ಕೆ ಆಡಳಿತ ಬಿಜೆಪಿ-ಶಿವಸೇನೆ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳ ನಡುವಿನ ಅಪವಿತ್ರ ಮೈತ್ರಿ ಕಾರಣವಾಗಿದೆ. ಉಭಯ ಪಕ್ಷಗಳನ್ನು ಅಧಿಕಾರದಿಂದ ಕಿತ್ತೊಗೆಯುವವರೆಗೆ ಈ ಮೈತ್ರಿಯನ್ನು ಕೊನೆಗಾಣಿಸಲು ಸಾಧ್ಯವಿಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News