ರಾಷ್ಟ್ರೀಯ ವೈದ್ಯಕೀಯ ಆಯೋಗ ಮಸೂದೆಗೆ ತಿದ್ದುಪಡಿ: ಬ್ರಿಡ್ಜ್ ಕೋರ್ಸ್ ಸ್ಥಗಿತ
ಹೊಸದಿಲ್ಲಿ, ಮಾ.28: ರಾಷ್ಟ್ರೀಯ ವೈದ್ಯಕೀಯ ಆಯೋಗ ಕಾಯ್ದೆಗೆ ತಿದ್ದುಪಡಿ ಮಾಡಲು ಕೇಂದ್ರ ಸರಕಾರ ಬುಧವಾರದಂದು ಅನುಮತಿ ನೀಡಿದೆ. ಆಮೂಲಕ ಆಯುಷ್ ವೈದ್ಯರು ಆಧುನಿಕ ವೈದ್ಯಕೀಯ ಪದ್ಧತಿಯನ್ನು ಕಲಿಯಲು ರೂಪಿಸಲಾಗಿದ್ದ ಬ್ರಿಡ್ಜ್ ಕೋರ್ಸ್ ಅನ್ನು ತೆಗೆದು ಹಾಕಲಾಗಿದೆ. ಬುಧವಾರದಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ, ಅಂತಿಮ ವೈದ್ಯಕೀಯ ಪರೀಕ್ಷೆಯು ದೇಶಾದ್ಯಂತ ಸಾಮಾನ್ಯ ಪರೀಕ್ಷೆಯಂತೆ ನಡೆಯಲಿದೆ ಮತ್ತು ಅದು ರಾಷ್ಟ್ರೀಯ ನಿರ್ಗಮನ ಪರೀಕ್ಷೆಯಾಗಿರಲಿದೆ. ಆಮೂಲಕ ಹೆಚ್ಚುವರಿ ಪರವಾನಿಗೆ ಪರೀಕ್ಷೆಯನ್ನು ಬರೆಯುವುದನ್ನು ತಪ್ಪಿಸಲಾಗಿದೆ ಎಂದು ಸರಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಗ್ರಾಮೀಣ ಭಾಗಗಳಲ್ಲಿ ಪ್ರಾಥಮಿಕ ಆರೋಗ್ಯಸೇವೆಯನ್ನು ವಿಸ್ತರಿಸುವ ಮತ್ತು ಅಭಿವೃದ್ಧಿಗೊಳಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ನಿರ್ಧಾರವನ್ನು ರಾಜ್ಯ ಸರಕಾರಗಳಿಗೆ ಬಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪರವಾನಿಗೆ ಪಡೆಯುವ ಸಲುವಾಗಿ ಹೆಚ್ಚುವರಿ ಪರೀಕ್ಷೆಯನ್ನು ಬರೆಯುವುದನ್ನು ತಪ್ಪಿಸಬೇಕು ಎಂದು ವೈದ್ಯಕೀಯ ವಿದ್ಯಾರ್ಥಿಗಳು ಸರಕಾರಕ್ಕೆ ಮಾಡಿರುವ ಮನವಿಯನ್ನು ಪರಿಗಣಿಸಿದ ಸಂಪುಟವು ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.