ಸಂತ್ರಸ್ತರಿಗೆ ನೆರವಾಗಲು ಲಕ್ನೋ ವಿವಿಯ ಸಹಕಾರ ಕೋರಿದ ಉ.ಪ್ರ.ಪೊಲೀಸರು

Update: 2018-04-21 14:56 GMT

ಲಕ್ನೋ,ಎ.21: ಮಹಿಳೆಯರ ವಿರುದ್ಧ ಅಪರಾಧಗಳನ್ನು ತಡೆಯಲು ಸಮಗ್ರ ಕಾರ್ಯತಂತ್ರವೊಂದನ್ನು ರೂಪಿಸಲು ಮತ್ತು ಸಂತ್ರಸ್ತರಿಗೆ ಆಪ್ತ ಸಮಾಲೋಚನೆ ಸೌಲಭ್ಯ ಕುರಿತು ಉತ್ತರ ಪ್ರದೇಶ ಪೊಲೀಸರು ಲಕ್ನೋ ವಿವಿಯ ಮನಃಶಾಸ್ತ್ರ ವಿಭಾಗದ ನೆರವು ಕೋರಿದ್ದಾರೆ. ಇಲಾಖೆಯು ಇತರ ರಾಜ್ಯಗಳ ವಿವಿಗಳ ತಜ್ಞರಿಂದಲೂ ನೆರವು ಕೋರಲಿದೆ.

ಮಹಿಳೆಯರ ವಿರುದ್ಧ ಅಪರಾಧಗಳ ಕುರಿತು ಚರ್ಚಿಸಲು ಲಕ್ನೋ ವಿವಿಯ ಮನಃಶಾಸ್ತ್ರ ವಿಭಾಗದ ಬೋಧಕರು ಡಿಜಿಪಿ ಒ.ಪಿ.ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಸಭೆಯೊಂದನ್ನು ನಡೆಸಿದ್ದಾರೆ.

ಮಹಿಳೆಯರ ಸುರಕ್ಷತೆ ಕುರಿತಂತೆ ಅಪರಾಧಗಳ ತಡೆ,ರಕ್ಷಣೆ,ತ್ವರಿತ ಹಸ್ತಕ್ಷೇಪ ಮತ್ತು ಸಂತ್ರಸ್ತರಿಗೆ ಮರುಬದುಕು ಹೀಗೆ ನಾಲ್ಕು ಮಟ್ಟಗಳಲ್ಲಿ ನಾವು ಕೆಲಸ ಮಾಡಬಹುದಾಗಿದೆ. ಎಲ್ಲ ಬೋಧಕ ವೃಂದದ ಸಭೆಯನ್ನು ಕರೆದು ಸಂತ್ರಸ್ತರಿಗೆ ಆಪ್ತ ಸಮಾಲೋಚನೆಯನ್ನು ಒದಗಿಸಲು ಹೇಗೆ ಮುಂದುವರಿಯಬೇಕು ಎನ್ನುವುದನ್ನು ನಾವು ಚರ್ಚಿಸಲಿದ್ದೇವೆ. ಸಮಾಜವನ್ನು ಕಾಡುತ್ತಿರುವ ಸಮಸ್ಯೆಯ ಪರಿಹಾರಕ್ಕಾಗಿ ರಾಜ್ಯ ಪೊಲೀಸರು ನಮ್ಮ ಬೆಂಬಲವನ್ನು ಕೋರಿರುವುದನ್ನು ನಾವು ಸ್ವಾಗತಿಸುತ್ತೇವೆ ಎಂದು ಲಕ್ನೋ ವಿವಿಯ ಮನಃಶಾಸ್ತ್ರ ವಿಭಾಗದ ಮುಖ್ಯಸ್ಥೆ ಮಧುರಿಮಾ ಪ್ರಧಾನ ಅವರು ಹೇಳಿದರು.

ಸಂತ್ರಸ್ತರಿಗೆ ಆಪ್ತ ಸಮಾಲೋಚನೆ ಮತ್ತು ನೆರವು ಒದಗಿಸಲು ಪೊಲೀಸ್ ಇಲಾಖೆಯು ಲಕ್ನೋ ವಿವಿ ಮತ್ತು ಇತರ ವಿವಿಗಳೊಂದಿಗೆ ಒಡಂಬಡಿಕೆಯನ್ನು ಮಾಡಿಕೊಳ್ಳಲಿದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಹಾಗೂ ಇಲಾಖೆಯ ವಕ್ತಾರ ರಾಹುಲ್ ಶ್ರೀವಾಸ್ತವ ತಿಳಿಸಿದರು. ಮಹಿಳೆಯರನ್ನು ಗೌರವಿಸುವಂತೆ ಜಾಗ್ರತಿ ಕಾರ್ಯಕ್ರಮಗಳನ್ನೂ ಶಾಲಾಮಟ್ಟಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News