​ಪ್ರಚಾರ: ಸಭ್ಯತೆಯ ಗಡಿ ಮೀರದಿರಲಿ

Update: 2018-04-25 18:28 GMT

ಮಾನ್ಯರೇ,

ಚುನಾವಣೆಯ ಪ್ರಚಾರದ ಅಂಗವಾಗಿ ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ಮನೆ ಮನೆಗೆ, ಊರು ಕೇರಿ, ಹಳ್ಳಿ ಹಳ್ಳಿಗಳಿಗೆ ನಿರಂತರವಾಗಿ ಹಗಲಿರಳು ಜನರನ್ನು ಸಂಪರ್ಕಿಸಿ ತಮಗೆ ಮತಹಾಕುವಂತೆ ಬೇಡಿಕೊಳ್ಳುತ್ತಿರುವುದು ನಿತ್ಯ ಮಾಧ್ಯಮಗಳಲ್ಲಿ ನಮಗೆ ನೋಡಲು ಸಿಗುತ್ತಿದೆ. ಇದೇ ವೇಳೆಯಲ್ಲಿ ಕೆಲವು ತಿಳಿಗೇಡಿಗಳು ಫೇಸ್‌ಬುಕ್ ಹಾಗೂ ವಾಟ್ಸ್‌ಆ್ಯಪ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ಕಣದಲ್ಲಿರುವ ಪಕ್ಷಗಳ ಮೇಲೆ ದ್ವೇಷಕಾರುವಂತಹ ಸಂದೇಶಗಳನ್ನು, ಚಿತ್ರವಿಚಿತ್ರ ಕೀಳು ಮಟ್ಟದ ಬರಹಗಳನ್ನು ರವಾನಿಸಿ ಸಮಾಜದ ಸ್ವಾಸ್ಥವನ್ನು ಕೆಡಿಸಲು ಪ್ರಯತ್ನಿಸುತ್ತಿರುವುದು ನಿಜಕ್ಕೂ ಖಂಡನಾರ್ಹವಾಗಿದೆ.

ಯಾವುದೇ ಪಕ್ಷದ ವಿರುದ್ಧ ಆಧಾರ ಸಹಿತವಾಗಿ ಸಭ್ಯ ಭಾಷೆಯಲ್ಲಿ ಟೀಕಿಸುವುದು, ಅವರ ದೌರ್ಬಲ್ಯಗಳನ್ನು ಎತ್ತಿತೋರಿಸಿ ಜನರನ್ನು ತಮ್ಮೆಡೆಗೆ ಸೆಳೆಯುವುದರಲ್ಲಿ ತಪ್ಪಿಲ್ಲ. ಆದರೆ ಸುಳ್ಳು ಆಧಾರರಹಿತ ಬೊಬ್ಬೆ ಹಾಕುವವರು ಹಾಗೂ ಎಲ್ಲೋ ನಡೆದ ಘಟನೆಯನ್ನು ಇನ್ನೆಲ್ಲಿಗೋ ಜೋಡಿಸಿ ಸಾಮಾಜಿಕ ಜಾಲತಾಣಗಳನ್ನು ಹಗೆತನದ ಕೇಂದ್ರವಾಗಿಸುತ್ತಿರುವ ಪುಢಾರಿಗಳಿಂದ ಸಮಾಜವು ಎಚ್ಚರದಿಂದಿರಬೇಕಾಗಿದೆ. ಸರಕಾರವು ಕೂಡಾ ಇಂತಹ ಕಿಡಿಗೇಡಿಗಳನ್ನು ಗುರುತಿಸಿ ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಮುಂದೆ ಆಗಬಹುದಾದಂತಹ ಅನಾಹುತಗಳಿಂದ ಸಮಾಜವನ್ನು ರಕ್ಷಿಸಬೇಕಾಗಿದೆ. ಚುನಾವಣೆಗಳು ಬರುತ್ತವೆ ಹಾಗೂ ಹೋಗುತ್ತವೆ, ಆದರೆ ನಾವು ಎಂದಿನಂತೆ ಅಣ್ಣತಮ್ಮಂದಿರಾಗಿ ಈ ಸಮಾಜದಲ್ಲಿ ಕೂಡಿ ಬಾಳಬೇಕಾಗಿದೆ. ಕೆಲವು ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಲಿಕ್ಕಾಗಿ ನಮ್ಮನ್ನು ಒಡೆದು ಆಳಲು ನೋಡುತ್ತಿವೆ. ಇಂತಹವರ ಯೋಜನೆಗಳನ್ನು ವಿಫಲಗೊಳಿಸುತ್ತಾ ಸತ್ಯ ಹಾಗೂ ನ್ಯಾಯದ ಪರವಾಗಿ ರಾಜ್ಯದ ಜನತೆ ನಿಲ್ಲಬೇಕಾಗಿದೆ. 

Writer - -ಆರ್. ಎಚ್. ಇಟಗಿ, ರೋಣ

contributor

Editor - -ಆರ್. ಎಚ್. ಇಟಗಿ, ರೋಣ

contributor

Similar News