ಸ್ವಾಭಿಮಾನ ಮೇಲ್ಜಾತಿಗೆ ಮಾತ್ರ ಸೀಮಿತವೇ?

Update: 2018-04-27 18:27 GMT

ಮಾನ್ಯರೇ,

ಒಬ್ಬ ಕೆಳಜಾತಿಯವನು ಸ್ವಾಭಿಮಾನ ಮತ್ತು ಆತ್ಮವಿಶ್ವಾಸ ತೋರಿದರೆ ಅದು ನಮಗೆ ದುರಹಂಕಾರ ಮತ್ತು ಭಂಡತನವಾಗಿ ಕಾಣುತ್ತದೆ. ಆದರೆ ಇದನ್ನೇ ಒಬ್ಬ ಮೇಲ್ಜಾತಿಯವನು ತೋರಿಸಿದರೆ ಆಗ ಅದು ನಮಗೆ ಸ್ವಾಭಿಮಾನವಾಗಿ ಕಾಣುತ್ತದೆ. ಇದಕ್ಕೆ ಕಾರಣ ನಮ್ಮ ಕಣ್ಣಿಗೆ ಮತ್ತು ಮೆದುಳಿಗೆ ತಾಗಿರುವ ಜಾತಿಯ ಪಾರ್ಶ್ವರೋಗ!
ಈಗ ಚುನಾವಣೆಯ ಸಮಯದಲ್ಲಿ ನಾವು ವಿವಿಧ ಪಕ್ಷಗಳ ನೇತಾರರು ಮತ್ತು ಅಭ್ಯರ್ಥಿಗಳ ಸ್ವಭಾವಗಳನ್ನು ತುಲನೆ ಮಾಡಿ ವಿಶ್ಲೇಷಿಸುವಾಗ ಮೇಲ್ಜಾತಿಯವರ ಆಕ್ರಮಣಕಾರಿ ಪಾಳೇಗಾರಿಕೆ ಬುದ್ಧಿ ನಮಗೆ ನಾಯಕತ್ವ ಗುಣವಾಗಿ ಕಾಣುತ್ತದೆ, ಆದರೆ ಕೆಳಜಾತಿಯವರು ಸ್ವಲ್ಪಒರಟು ವರ್ತನೆ ತೋರಿಸಿದರೂ ಸಾಕು, ''ಅಧಿಕಾರದ ಮದ ಅವನ ತಲೆಗೆ ಹೋಗಿದೆ'' ಎಂದು ಹೀಯಾಳಿಸುತ್ತೇವೆ. ನಮಗೆ ಪ್ರಿಯವಾದ ಪಕ್ಷದವರು ಮಾಡುವ ಎಲ್ಲಾ ತಪ್ಪುಗಳು ನಮಗೆ ಸಮರ್ಥನೀಯವಾಗಿ ಕಾಣುತ್ತವೆ, ಆದರೆ ಬೇರೊಂದು ಪಾರ್ಟಿಯವರು ಅದೇ ತಪ್ಪುಮಾಡಿದರೆ ನಮಗೆ ಅದು ಘೋರ ಅಪರಾಧವಾಗಿ ಕಾಣಿಸುತ್ತದೆ.
ಮೊನ್ನೆ ಒಂದು ಸಮಾರಂಭದಲ್ಲಿ ನನಗೆ ಒಂದು ರಾಷ್ಟ್ರೀಕೃತ ಬ್ಯಾಂಕ್‌ನ ನಿವೃತ್ತ ಮೇಲಧಿಕಾರಿ ಸಿಕ್ಕಿದ್ದರು. ಮಾತು ಮಾತಲ್ಲಿ ಅವರು ''ಸಿದ್ದರಾಮಯ್ಯನವರು ಮೊದಲಿನ ಯಾವುದೇ ಮುಖ್ಯಮಂತ್ರಿ ಮಾಡದಿರುವಷ್ಟು ಒಳ್ಳೆಯ ಜನಪರ ಯೋಜನೆಗಳನ್ನು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವುದು ನಿಜ, ಅವರು ಭಾರತದ ಈಗಿನ ಬೇರೆ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಹೋಲಿಸಿದರೆ ಎಲ್ಲರಿಗಿಂತ ಉತ್ತಮ ಮುಖ್ಯಮಂತ್ರಿ ಆಗಿರುವುದೂ ನಿಜ, ಆದರೆ ಅವರು ಒರಟ ಮತ್ತು ಅಹಂಕಾರಿ'' ಎಂಬ ನಕಾರಾತ್ಮಕ ಟಿಪ್ಪಣಿ ಕೊನೆಯಲ್ಲಿ ಸೇರಿಸಲು ಮರೆಯಲಿಲ್ಲ. ಮೊದಲಿನ ಹಲವು ಮೇಲ್ಜಾತಿ ಮುಖ್ಯಮಂತ್ರಿಗಳ ಒರಟುತನದ ಉದಾಹರಣೆ ನಾನು ಕೊಟ್ಟರೂ ಆ ಬ್ಯಾಂಕ್ ಅಧಿಕಾರಿಗೆ ಸಮಾಧಾನವಾದಂತೆ ಕಾಣಲಿಲ್ಲ. ನಮಗೆ ಒಬ್ಬ ರಾಜಕ್ಕೀಯ ನೇತಾರನ ವೈಯಕ್ತಿಕ ಸ್ವಭಾವ ತೆಗೆದುಕೊಂಡು ಏನಾಗಬೇಕಿದೆ?, ನಮಗೆ ಬೇಕಿರುವುದು ನಮ್ಮ ನಾಡಿನ ಸಮಸ್ಯೆಗಳನ್ನು ದಕ್ಷತೆಯಿಂದ ಪ್ರಾಮಾಣಿಕವಾಗಿ ಬಗೆಹರಿಸುವ ವ್ಯಕ್ತಿ ಎಂದು ನಾನು ಬಿಡಿಸಿ ಹೇಳಿದರೂ ಅವರ ಪೂರ್ವಾಗ್ರಹ ಬಿಟ್ಟು ಹೋಗಲಿಲ್ಲ. ಒಟ್ಟಾರೆ ಸಿದ್ದರಾಮಯ್ಯ ಕೆಳಜಾತಿಯ ಕುರುಬ ಸಮುದಾಯದವರಾದುದರಿಂದ ಅವರು ಯಾವಾಗಲೂ ಎಲ್ಲರಿಗೂ ತಗ್ಗಿ ಬಗ್ಗಿ ನಡೆಯುತ್ತಾ ಅದೇ ದಾಸ್ಯ ಮನೋವೃತ್ತಿ ತೋರಿಸಬೇಕಿತ್ತು ಎಂಬುದೇ ಅವರ ಮಾತಿನ ಅಂತರ್ಯವಾಗಿತ್ತು. ಇಂತಹ ಉನ್ನತ ವಿದ್ಯೆ ಹೊಂದಿದ್ದ ಹಿರಿಯ ವಯಸ್ಸಿನ ಮೇಲ್ಜಾತಿ ಅಧಿಕಾರಿಗಳಿಗೂ ಜನರ ಸ್ವಭಾವದ ನಿಷ್ಪಕ್ಷ ವಿಶ್ಲೇಷಣೆ ಸಾಧ್ಯವಿಲ್ಲ ಎಂದ ಮೇಲೆ ಮೇಲ್ಜಾತಿಯ ಅರೆ-ಸಾಕ್ಷರ ಮತದಾರರು ಎಷ್ಟೊಂದು ಜಾತಿ ಪೂರ್ವಾಗ್ರಹ ಹೊಂದಿರಬಹುದು ಊಹಿಸಿ?
ಮುಖ್ಯಮಂತ್ರಿಗಳ ಉತ್ತಮ ಯೋಜನೆಗಳನ್ನು ಇಂತಹ ಅರೆ-ಸಾಕ್ಷರರು ಯಾವ ರೀತಿಯಲ್ಲಿ ವಿಶ್ಲೇಷಿಸಿ ಮತದಾನ ಮಾಡಬಹುದು ಎಂದು ಆಲೋಚಿಸಿದಾಗ ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಇನ್ನೂ ಮಾಗಿಲ್ಲವೆಂದು ಅನಿಸುತ್ತ್ತಿದೆ.
ಸಿದ್ದರಾಮಯ್ಯರ ಸ್ವಾಭಿಮಾನ ಮತ್ತು ಆತ್ಮವಿಶ್ವಾಸ ಬಿಜೆಪಿಯವರಿಗೆ ಭಂಡತನ ಮತ್ತು ದುರಹಂಕಾರವಾಗಿ ಕಾಣುತ್ತದೆ. ಆದರೆ ಮೋದಿಯ ದುರಹಂಕಾರ ಮತ್ತು ಅಮಿತ್ ಶಾರ ಭಂಡತನ ಅವರಿಗೆ ಸಾತ್ವಿಕ ಗುಣಗಳಾಗಿ ಕಾಣುತ್ತವೆ ಎಂಬುದೇ ವಿಪರ್ಯಾಸ.             

Writer - -ಆರ್.ಬಿ. ಶೇಣವ, ಮಂಗಳೂರು

contributor

Editor - -ಆರ್.ಬಿ. ಶೇಣವ, ಮಂಗಳೂರು

contributor

Similar News