​ಕರಾವಳಿಯ ಭೂತದ ಖಡ್ಗದಲ್ಲಿ 'ಮೂಲಹಿಂದುತ್ವ ವರ್ಸಸ್ ಬ್ರಾಹ್ಮಣ ಹಿಂದುತ್ವ'

Update: 2018-05-05 15:59 GMT

ಚುನಾವಣೆಯ ಈ ದಿನಗಳಲ್ಲಿ ತುಳುನಾಡು ಹೊಸ ಸಂಘರ್ಷಕ್ಕೆ ಕಾರಣವಾಗಿದೆ. ಶೂದ್ರರ ಭೂತಾರಾಧನೆಯಲ್ಲಿ ಕೋಮು ಆಗಮ ಹಿಂದುತ್ವ ನುಸುಳಿರುವುದನ್ನು ಸ್ವತಃ ಭೂತವೇ ವಿರೋಧಿಸಿ ಖಡ್ಗ ಝಳಪಿಸಿರೋ ಘಟನೆಗೆ ತುಳುವರು ಸಾಕ್ಷಿಯಾಗಿದ್ದಾರೆ. 

ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಮಂಗಳೂರು ಹೊರವಲಯದ ಮಲ್ಲೂರಿನಲ್ಲಿ ಜುಮಾದಿ ಕೋಲ ನಡೆಯುತ್ತಿದ್ದ ಭೂತಸಾನಕ್ಕೆ ಕಾಂಗ್ರೆಸ್ ಶಾಸಕ ಮೊಯ್ದೀನ್ ಬಾವ ತೆರಳಿದ್ದರು. ಭೂತವನ್ನು ಅವಾಹಿಸಿಕೊಂಡ ಪಾತ್ರಿ ಮೊಯ್ದಿನ್ ಬಾವರ ಕೈಹಿಡಿದು ಕರಿಗಂಧ ಪ್ರಸಾದ ನೀಡಿದೆ. ಇತ್ತಿಚೆಗೆ ಆರೆಸ್ಸೆಸ್ ಕಲ್ಲಡ್ಕ ಪ್ರಭಾಕರ ಭಟ್ಟರು ಭಾಷಣ ಮಾಡುತ್ತಾ, "ಭೂತಗಳು ಯು.ಟಿ. ಖಾದರ್, ಮೊಯ್ದೀನ್ ಬಾವ ಬಂದರೆಂದು ಬೂಳ್ಯ ಪ್ರಸಾದ ನೀಡಬಾರದು. ಹಿಂದುವೇತರರಿಗೆ ಪ್ರಸಾದ ನೀಡಬಾರದು" ಎಂದಿದ್ದರು. ಈ ಕೋಮು ವಿಷವನ್ನು ತುಂಬಿಕೊಂಡಿದ್ದ ಯುವಕನೊಬ್ಬ ಜುಮಾದಿ ದೈವದ ಬಳಿ ಬಂದು ಮೊಯ್ದೀನ್ ಬಾವರಿಗೆ ಪ್ರಸಾದ ನೀಡಿರೋದನ್ನು ಆಕ್ಷೇಪಿಸಿದ. ಇದರಿಂದ ಕೆರಳಿದ ಜುಮಾದಿ ಭೂತವು ಯುವಕನ ವಿರುದ್ಧ ತನ್ನಲ್ಲಿದ್ದ ಖಡ್ಗವನ್ನು ಝಳಪಿಸಿತು. ಮತ್ತೆ ಸಾನದ ಬಾಗಿಲಿಗೆ ತೆರಳಿದ ಜುಮಾದಿಯು, "ನನಗೆ ಎಲ್ಲರೂ ಸಮಾನರು. ನನ್ನ ಸಾನಕ್ಕೆ ಬಂದವರಿಗೆ ಕರಿಗಂಧ ನೀಡಲೇಬೇಕು" ಎಂದು ಹೇಳಿತು. ಇಷ್ಟಕ್ಕೆ ತೃಪ್ತಿಯಾಗದ ಜುಮಾದಿ ತನ್ನ ಖಡ್ಗದಿಂದ ಮೂರು ಬಾರಿ ಭೂಮಿಗೆ ಇರಿಯಿತು. ದೈವವು ಖಡ್ಗದಿಂದ ಭೂಮಿಗೆ ಇರಿಯುವುದು ಊರಿಗೆ ಕೇಡು ಇದೆ ಎಂಬ ನಂಬಿಕೆ ತುಳುವರಲ್ಲಿದೆ. ಜುಮಾದಿಯು ಇನ್ನಷ್ಟೂ ಆವೇಶಭರಿತವಾಗಿ ಅಲ್ಲಿದ್ದ ಯುವಕರನ್ನು ಖಡ್ಗದಿಂದ ಬೆನ್ನಟ್ಟಿತು. ಇಡೀ ಜುಮಾದಿ ಕೋಲವು ರಣರಂಗವಾಗಿತ್ತು.

ವೈದಿಕ ಹಿಂದುತ್ವದ ವಿಷ ತುಂಬಿಕೊಂಡ ಯುವ ಸಮುದಾಯ ಕರಾವಳಿಯ ನೈಜ ಮೂಲ ಹಿಂದುತ್ವವನ್ನು ಮರೆತಿದೆ. ಕರಾವಳಿಯ ಭೂತಸಾನಗಳು, ನಾಗ ಬೆಮ್ಮೆರು, ಗರೋಡಿಗಳೇ ತುಳುನಾಡಿನ ಧಾರ್ಮಿಕ ಸಂಸ್ಕೃತಿಗಳು. ತುಳುವ ಹಿಂದೂ ಸಂಸ್ಕೃತಿಯ ಜೊತೆಜೊತೆಗೇ ಸಮಕಾಲೀನವಾಗಿ ಬೆಳೆದಿರುವುದು ಬ್ಯಾರಿ ಸಂಸ್ಕೃತಿ. ಅದರಲ್ಲೂ ಭೂತಗಳಿಗೂ ಬ್ಯಾರಿಗಳಿಗೂ ಅವಿನಾನುಭಾವ ಸಂಬಂಧ ಇದೆ. ಜುಮಾದಿಗಂತೂ ಕೆಲವೆಡೆ ಬ್ಯಾರಿ ಮುಸ್ಲಿಮರಿಲ್ಲದೆ ಅಸ್ತಿತ್ವವೇ ಇಲ್ಲ. 

ಸುಳ್ಯ, ಕಾಸರಗೋಡು ಗಡಿ ಭಾಗದಲ್ಲಿ ಮಾಪುಳ್ತಿ ಭೂತವನ್ನು ಆರಾಧನೆ ಮಾಡುತ್ತಾರೆ. ಮಾಪುಳ್ತಿ ಭೂತ ಬ್ಯಾರಿ ಭೂತ. ಜುಮಾದಿಯ ಕೋಲ ನಡೆಯುತ್ತಿದ್ದಾಗ ಗೌರವ ಕೊಡದೆ ಕೆಲಸ ಮಾಡುತ್ತಿದ್ದ ಮಾಪುಳ್ತಿ ಎಂಬ ಬ್ಯಾರಿ ಮಹಿಳೆಯನ್ನು ಜುಮಾದಿ ಮಾಯ ಮಾಡುತ್ತಾಳೆ. ನಂತರ ಮಾಪುಳ್ತಿಯನ್ನು ತನ್ನ ಜೊತೆ ಜುಮಾದಿ ಇರಿಸಿಕೊಳ್ಳುತ್ತಾಳೆ. ಕೆಲ ಪ್ರದೇಶಗಳಲ್ಲಿ ಜುಮಾದಿ ದೈವಕ್ಕೆ ಕೋಲ/ನೇಮ/ಜಾತ್ರೆ ನಡೆಯುವ ಮೊದಲು ಮಾಪುಳ್ತಿ ಬ್ಯಾರ್ದಿ ಭೂತಕ್ಕೆ ಕೊಲ ನಡೆಯಬೇಕು. ಮಾಪುಳ್ತಿ ಭೂತದ ಕೋಲದ ಬಳಿಕವೇ ಜುಮಾದಿ ಕೋಲ ಪ್ರಾರಂಭವಾಗುತ್ತದೆ. ಇಲ್ಲಿ ಬ್ಯಾರಿ ಎಂಬ ಸಮುದಾಯ ಇಲ್ಲದೇ ಇದ್ದರೆ ಜುಮಾದಿಗೆ ಅಸ್ತಿತ್ವವೇ ಇರುವುದಿಲ್ಲ. 

ಮಂಜೇಶ್ವರದ ಮಾಡ ಅರಸು ಮಂಜೇಷ್ಣಾರ್ ಅಣ್ಣತಮ್ಮ ದೈವಗಳ ನೇಮ/ ಜಾತ್ರೆಯು ಮುಸ್ಲಿಮರು ಇಲ್ಲದೆ ನಡೆಯುವುದೇ ಇಲ್ಲ. ಊರಿನ ಯಜಮಾನಿಕೆಯ ಮನೆ, ಬ್ರಾಹ್ಮಣರಿಗೆ ಎಷ್ಟು ಮರ್ಯಾದೆ ಈ ಭೂತ ನೀಡುತ್ತದೋ ಅದರ ದುಪ್ಪಟ್ಟು ಮರ್ಯಾದೆ ಮುಸ್ಲಿಮರಿಗೆ ಇಲ್ಲಿ ಸಲ್ಲುತ್ತದೆ. ತುಳುನಾಡಿಗರ ಅಲಿಖಿತ ದೈವವಾಣಿಯಾಗಿರುವ ಜನಪದ ಪಾಡ್ದನಗಳ ಪ್ರಕಾರ ತುಳುನಾಡಿನಲ್ಲಿ ಹಿಂದೂಗಳಿಗಿಂತಲೂ ಮೊದಲು ಬ್ಯಾರಿ ಮುಸ್ಲಿಮರಿದ್ದರೇ ಎಂಬ ಪ್ರಶ್ನೆಯೂ ಇಲ್ಲಿ ಉದ್ಬವವಾಗುತ್ತದೆ. ಪಾಡ್ದನಗಳ ಪ್ರಕಾರ ಅರಸು ಮಂಜೇಷ್ಣಾರ್ ಅಣ್ಣ ತಮ್ಮ ದೈವಗಳು ಘಟ್ಟದಿಂದ ಇಳಿದು ಬಂದಾಗ ಮಂಜೇಶ್ವರ ಮಾಡದಲ್ಲಿ ಉಳಿದುಕೊಳ್ಳಲು ಜಾಗ ಸಿಗಲಿಲ್ಲವಂತೆ. ದೈವಗಳು ಪ್ರವಾದಿ ಜೊತೆ ಮಾತನಾಡಿದಾಗ ಮಾಡ ಮಸೀದಿಯ ಜಾಗದಲ್ಲಿ ನೆಲೆಯೂರುವಂತೆ ಸಂದೇಶ ಬಂತಂತೆ ಎನ್ನುವ ನಂಬಿಕೆಯಿದೆ. ಅದರಂತೆ ಅಣ್ಣತಮ್ಮ ದೈವ/ಭೂತಗಳು ಮಾಡ ಮಸೀದಿಯ ಜಾಗದಲ್ಲಿ ನೆಲೆಯೂರಿ ಕಾರ್ಣಿಕ ತೋರಿಸಲಾರಂಭಿಸಿದವು.

ಅನಾದಿ ಕಾಲದಿಂದಲೂ ಅರಸು ಮಂಜೇಷ್ಣಾರ್ ಅಣ್ಣ ತಮ್ಮ ದೈವದ ನೇಮ ನಡೆಯಬೇಕು ಎಂದಿದ್ದರೆ ಮಸೀದಿಯಿಂದ ಮೌಲ್ವಿಗಳು ಬರಲೇಬೇಕು. ಅದಕ್ಕಾಗಿ ಸ್ವತಃ ದೈವವನ್ನು ಅವಾಹಿಸಿಕೊಂಡು ಶುಕ್ರವಾರ ಮಸೀದಿಗೆ ತೆರಳಿ ಮೌಲ್ವಿಗಳನ್ನು ಜಾತ್ರೆಗೆ ಆಹ್ವಾನಿಸುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಜಾತ್ರೆಗೆ ಬರುವ ಮುಸ್ಲಿಮರಿಗೆ ಅತ್ಯಂತ ಎತ್ತರದ ಜಾಗದಲ್ಲಿ ರಾಜರಂತೆ ಕುಳಿತುಕೊಂಡು ದೈವದ ಕೋಲವನ್ನು ವೀಕ್ಷಿಸುವ ವ್ಯವಸ್ಥೆ ಮಾಡಲಾಗಿರುತ್ತದೆ. ಎತ್ತರದ ಜಾಗದಲ್ಲಿ ಕುಳಿತುಕೊಂಡ ಮುಸ್ಲಿಮರಿಂದ ಅನುಮತಿಯನ್ನು ಪಡೆದುಕೊಂಡು ದೈವ ಕುಣಿತ ಪ್ರಾರಂಭಿಸುತ್ತದೆ.
ಕಾಸರಗೋಡಿನಿಂದ ಉಡುಪಿಯವರೆಗೆ ಇರುವ ಕಡಲ ತೀರದ ಮೀನುಗಾರ ಮೊಗವೀರರು ಬೊಬ್ಬರ್ಯ ದೈವವನ್ನು ಆರಾಧಿಸುತ್ತಾರೆ. ಬೊಬ್ಬರ್ಯ ದೈವ ಮುಸ್ಲಿಂ ದೈವಕ್ಕೆ ಒಂದೊಳ್ಳೆ ಉದಾಹರಣೆ. ಇದಲ್ಲದೇ ಇಡೀ ಕರಾವಳಿಯಲ್ಲಿ ಅಲಿಭೂತ, ಮಾಪಿಳ್ಳೆ ಭೂತ, ಬ್ಯಾರ್ದಿ ಭೂತಗಳನ್ನು ಶ್ರದ್ದಾಭಕ್ತಿಯಿಂದ ಹಿಂದೂಗಳು ಆರಾಧನೆ ಮಾಡುತ್ತಾರೆ. ಆಗಿನ ಕಾಲದ ಸಾಮಾಜಿಕ ಶೋಷಣೆಯ ವಿರುದ್ಧ ಹೋರಾಡಿದವರು, ಯಾವುದೋ ಒಂದು ಸಂದೇಶವನ್ನು ನೀಡಿ ಮಾಯ(ಸಾವು)ವಾದವರು ನಮ್ಮನ್ನು ಈಗಲೂ ರಕ್ಷಣೆ ಮಾಡುತ್ತಿದ್ದಾರೆ ಎಂದು ನಂಬಿಕೆಯಿಂದ ಆರಾಧಿಸುವುದೇ ದೈವ/ಭೂತಾರಾಧನೆಯಾಗಿದೆ. ಅದಕ್ಕೆ ಜಾತಿ, ಧರ್ಮದ ಹಂಗುಗಳು, ಗೆರೆಗಳು ಇರುವುದಿಲ್ಲ.

ಕೋಡ್ದಬ್ಬು, ತನ್ನಿಮಾನಿಗ, ಜಾರಂದಾಯ ಸೇರಿದಂತೆ ಯಾವುದೇ ಊರ ದೈವಗಳು ತನ್ನ ಗಗ್ಗರ ಸೇವೆಯ ಬಳಿಕ ಕುಣಿತ ಆರಂಭಿಸಬೇಕಾದರೆ ಊರಲ್ಲಿರೋ ದೇವಸ್ಥಾನ, ಮಸೀದಿ, ಚರ್ಚ್ ಗಳಿಗೆ ಗೌರವ ನೀಡುತ್ತದೆ. ಒಂದು ಹಿಡಿ ಹಿಂಗಾರ ಮತ್ತು ಎಳನೀರನ್ನು ದೇವಸ್ಥಾನ ಮಸೀದಿ, ಚರ್ಚ್ ಇರುವ ದಿಕ್ಕಿನೆಡೆಗೆ ಎಸೆದು ಸಮರ್ಪಿಸುತ್ತದೆ. ಬಳಿಕ ಮಸೀದಿ ದೇಗುಲದ ಜೊತೆ ಅಲೌಕಿಕ ಮಾತುಕತೆ ನಡೆಸುತ್ತದೆ. ಇದು ಕರಾವಳಿಯ ಭೂತಾರಾಧನೆಯ ವೈಶಿಷ್ಟ್ಯ. ಭೂತಾರಾಧನೆಯ ಪ್ರಾರಂಭದಿಂದಲೇ ಬಂದ ಈ ಸಂಪ್ರದಾಯಗಳನ್ನು ಆರೆಸ್ಸೆಸ್ ಹಿಂದುತ್ವ ವಿರೋಧ ಮಾಡುತ್ತದೆ ಎನ್ನುವ ಕಾರಣಕ್ಕಾಗಿ ಭೂತಗಳು ಬದಲಾಯಿಸಲಾಗುವುದಿಲ್ಲ.

ತುಳುನಾಡಿಗರಿಗೆ ಭೂತಾರಾಧನೆ, ನಾಗಬೆಮ್ಮೆರು, ಗರಡಿಗಳೇ ಆರಾಧನಾ ಸ್ಥಳಗಳು. ಇಲ್ಲಿನ ಮೂಲ ಹಿಂದುತ್ವವೂ ಅವೇ ಆಗಿವೆ. ಎಲ್ಲೋ ದೂರದಲ್ಲಿರುವ ಅಯೋಧ್ಯೆಯ ರಾಮ ಮಂದಿರಕ್ಕಾಗಿ ಹಿಂದುತ್ವವನ್ನು ಆವಾಹಿಸಿಕೊಂಡರೆ ನಮ್ಮ ತುಳುವರ ಮೂಲ ಹಿಂದುತ್ವಕ್ಕೆ ಧಕ್ಕೆಯಾಗುತ್ತದೆ. ಭೂತಾರಾಧನೆಗೆ ಮುಸ್ಲಿಮರು ಬರಬಾರದು, ಬಂದ ಮುಸ್ಲಿಮರಿಗೆ ಗೌರವಪೂರ್ವಕ ಬೂಳ್ಯ ಕೊಡಬಾರದು ಎಂದು ವೈದಿಕ ಹಿಂದುತ್ವ ಹೇಳಿದರೆ ಕರಾವಳಿಯ ಮೂಲ ಹಿಂದುತ್ವಕ್ಕೆ ಪೆಟ್ಟು ಬೀಳುತ್ತಿದೆ ಎಂದರ್ಥ. ಸದ್ಯ ಕರಾವಳಿಯ ಭೂತಾರಾಧನೆಯಂತಹ ಮೂಲಹಿಂದುತ್ವಕ್ಕೆ ಧಕ್ಕೆಯಾಗಿರುವುದರಿಂದಲೇ ಹಲವೆಡೆ ಬ್ಯಾರಿ ಭೂತದ ಜೊತೆಗೇ ಇರುವ ಜುಮಾದಿ ಭೂತವು ಬ್ಯಾರಿಗಳಿಂದ ದೂರ ಇರಬೇಕು ಎಂದು ಕೋಮುವಿಷ ತುಂಬಿಕೊಂಡ ಅಮಾಯಕ ಯುವಕರು ಆಗ್ರಹಿಸುತ್ತಿದ್ದಾರೆ. ಜುಮಾದಿಯು ತನ್ನ ಖಡ್ಗದ ಮೂಲಕ ಉತ್ತರ ನೀಡುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. 
ಸದ್ಯ ಕರಾವಳಿಯ ಮೂಲಹಿಂದುತ್ವವನ್ನು ಉಳಿಸಲು ಯುವಕರು ಪಾಡ್ದನಗಳು ಮತ್ತು ಅವೈದಿಕ ಧಾರ್ಮಿಕ ಸಂಸ್ಕೃತಿಯನ್ನು ಅರಿತುಕೊಂಡು, ವೈದಿಕ ಹಿಂದುತ್ವದಿಂದ ಹೊರ ಬಂದು ಭೂತಸಾನ- ಗರಡಿಗಳಿಗೆ ಮರಳಬೇಕಿದೆ. ಮಾಲ್ಲೂರಿನ ಜುಮಾದಿಯಂತಹ ಭೂತಗಳು ಯುವಜನರ ಬೆನ್ನಿಗೆ ನಿಲ್ಲಬೇಕಿದೆ.

Writer - ನವೀನ್ ಸೂರಿಂಜೆ

contributor

Editor - ನವೀನ್ ಸೂರಿಂಜೆ

contributor

Similar News