ನ್ಯಾಯ ಸಿಗದಿದ್ದರೆ ಬೆಂಕಿ ಹಚ್ಚಿ ಸಾಯುತ್ತೇನೆಂದ ಮಹಿಳೆ
ಶಹಜಹಾನಪುರ್, ಮೇ 10: ತನ್ನ ಮೇಲೆ 2012ರಲ್ಲಿ ಅತ್ಯಾಚಾರಗೈದ ಬಿಜೆಪಿ ಶಾಸಕ ರೋಶನ್ ಲಾಲ್ ವರ್ಮ ಎಂಬಾತನ ಪುತ್ರನನ್ನು ಬಂಧಿಸದೇ ಇದ್ದಲ್ಲಿ ತಾನು ಬೆಂಕಿ ಹಚ್ಚಿ ಸಾಯುತ್ತೇನೆಂದು ಶಹಜಹಾನಪುರ್ ಎಂಬಲ್ಲಿನ ಮಹಿಳೆಯೊಬ್ಬರು ಬೆದರಿಕೆ ಹಾಕಿದ್ದಾರೆ. ಆರೋಪಿ ಶಾಸಕ ತಿಲ್ಹರ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಘಟನೆ ನಡೆದಾಗ ಆತ ಬಿಎಸ್‍ಪಿ ಶಾಸಕನಾಗಿದ್ದ.
"ಶಾಸಕ ಮತ್ತಾತನ ಪುತ್ರ ಮನೋಜ್ ವರ್ಮಾ ಇಬ್ಬರನ್ನೂ ಜೈಲಿಗಟ್ಟಬೇಕು. ಸ್ಥಳೀಯಾಡಳಿತ ನನಗೆ ಮೇ 21ರ ತನಕ ಕಾಯಲು ಹೇಳಿದೆ. ಅಲ್ಲಿಯ ತನಕ ಅವರು ಕ್ರಮ ಕೈಗೊಳ್ಳದೇ ಇದ್ದರೆ ನಾನು ಅದೇ ದಿನ ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ'' ಎಂದು ಮಹಿಳೆ ಹೇಳಿಕೊಂಡಿದ್ದಾಳೆ.
ಶಹಜಹಾನಪುರದ ಹೋಟೆಲ್ ಒಂದರಲ್ಲಿ ತನ್ನ ವಿರುದ್ಧದ ಆರೋಪಗಳಿಗೆ ಸ್ಪಷ್ಟೀಕರಣ ನೀಡಲು ಆರೋಪಿ ಶಾಸಕ ಆಯೋಜಿಸಿದ್ದ ಪತ್ರಿಕಾಗೋಷ್ಠಿಯ ಸ್ಥಳಕ್ಕೆ ಸಂತ್ರಸ್ತೆ ತನ್ನ ತಂದೆ, ಸೋದರ ಹಾಗೂ ಐದು ವರ್ಷದ ಪುತ್ರಿಯೊಂದಿಗೆ ನುಗ್ಗಿ ಈ ಬೆದರಿಕೆ ಹಾಕಿದ್ದಾಳೆ. ಆಕೆಯನ್ನು ಪೊಲೀಸರು ಅಲ್ಲಿಂದ ಹೊರ ಕರೆದುಕೊಂಡು ಹೋದರೂ ಆಕೆ ಹೋಟೆಲ್ ಪಕ್ಕದ ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದ್ದಾಳೆ.
ವರ್ಮಾನ ಗೂಂಡಾಗಳು ತನ್ನನ್ನು ಬೆದರಿಸುತ್ತಿದ್ದಾರೆ, ಇಷ್ಟು ವರ್ಷ ನನಗೆ ನ್ಯಾಯ ನಿರಾಕರಿಸಲಾಗಿದೆ. ನ್ಯಾಯ ಆಗ್ರಹಿಸಿ ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಆದಿತ್ಯನಾಥ್ ಗೆ ಪತ್ರ ಬರೆದಿದ್ದೇನೆ ಎಂದು ಸಂತ್ರಸ್ತೆ ಹೇಳಿದ್ದಾರೆ.
ಆರೋಪಿ ಶಾಸಕ ಮತ್ತಾತನ ಪುತ್ರ ಆಕೆಯನ್ನು ಫೆಬ್ರವರಿ 24, 2012ರಂದು ತನ್ನ ಬಾಯಿಗೆ ಬಟ್ಟೆ ತುರುಕಿ, ಕಣ್ಣಿಗೆ ಬಟ್ಟೆ ಕಟ್ಟಿ ನಿರ್ಜನ ಪ್ರದೇಶದ ಮನೆಯೊಂದಕ್ಕೆ ಕರೆದೊಯ್ದಿದ್ದರು. ಅದೇ ದಿನ ಮನೋಜ್ ಆಕೆಯ ಮೇಲೆ ಅತ್ಯಾಚಾರಗೈದು ನಂತರ ಒಂಬತ್ತು ದಿನ ಆಕೆಯನ್ನು ಗೃಹಬಂಧನದಲ್ಲಿರಿಸಿದ್ದಾಗಿ ಸಂತ್ರಸ್ತೆ ಆರೋಪಿಸಿದ್ದಾರೆ.