ಮಾಜಿ ಟೆಸ್ಟ್ ಕ್ರಿಕೆಟಿಗ ರಾಜಿಂದರ್ ಪಾಲ್ ನಿಧನ
ಹೊಸದಿಲ್ಲಿ, ಮೇ 10: ಭಾರತದ ಪರ ಕೇವಲ ಒಂದು ಟೆಸ್ಟ್ ಪಂದ್ಯವನ್ನು ಆಡಿರುವ ಡೆಲ್ಲಿಯ ಮಾಜಿ ಕ್ರಿಕೆಟಿಗ ರಾಜಿಂದರ್ ಪಾಲ್ ಬುಧವಾರ ಡೆಹ್ರಾಡೂನ್ ನಿವಾಸದಲ್ಲಿ ನಿಧನರಾಗಿದ್ದಾರೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಬಲಗೈ ಮಧ್ಯಮ ವೇಗದ ಬೌಲರ್ ರಾಜಿಂದರ್ ಪಾಲ್ 1963-64ರಲ್ಲಿ ಮುಂಬೈನ ಬ್ರೆಬೋರ್ನ್ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ಧ ಏಕೈಕ ಟೆಸ್ಟ್ ಪಂದ್ಯವನ್ನು ಆಡಿದ್ದರು. ಆ ಪಂದ್ಯದಲ್ಲಿ ಪಾಲ್ 13 ಓವರ್ ಬೌಲಿಂಗ್ ಮಾಡಿದ್ದರು. ಆದರೆ ವಿಕೆಟ್ ಪಡೆಯಲು ವಿಫಲರಾಗಿದ್ದರು. ಮುಂದಿನ ಪಂದ್ಯದಲ್ಲಿ ಆಯ್ಕೆಗಾರರು ಪಾಲ್ ಬದಲಿಗೆ ವೇಗದ ಬೌಲರ್ ರಮಾಕಾಂತ್ ದೇಸಾಯಿ ಅವರನ್ನು ಆಯ್ಕೆ ಮಾಡಿದ್ದರು. ರಾಜಿಂದರ್ ದೇಶೀಯ ಕ್ರಿಕೆಟ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದರು. 98 ಪ್ರಥಮ ದರ್ಜೆ ಪಂದ್ಯಗಳಲ್ಲಿ ಒಟ್ಟು 337 ವಿಕೆಟ್‌ಗಳನ್ನು ಕಬಳಿಸಿದ್ದ ಪಾಲ್ 23 ಬಾರಿ ಐದು ವಿಕೆಟ್ ಗೊಂಚಲುಗಳನ್ನು ಪಡೆದಿದ್ದಾರೆ.
ರಣಜಿ ಟ್ರೋಫಿಯಲ್ಲಿ ದಶಕಗಳ ಕಾಲ ದಿಲ್ಲಿ ತಂಡವನ್ನು ಪ್ರತಿನಿಧಿಸಿದ್ದ ಪಾಲ್ ದಕ್ಷಿಣ ಪಂಜಾಬ್ ಹಾಗೂ ಹರ್ಯಾಣ ತಂಡದಲ್ಲೂ ಆಡಿದ್ದರು.
ಪಾಲ್ ನಿವೃತ್ತಿಯಾದ ಬಳಿಕ ಜೂನಿಯರ್ ಕ್ರಿಕೆಟಿಗರಿಗೆ ತರಬೇತಿ ನೀಡುತ್ತಿದ್ದರು. ಡೆಹ್ರಾಡೂನ್‌ನಲ್ಲಿ ನೆಲೆಸಿದ್ದರು.