×
Ad

ಅಸಂಬದ್ಧ ಮತ್ತು ಹಾಸ್ಯಾಸ್ಪದ ವ್ಯಾಖ್ಯಾನಗಳನ್ನು ನೀಡುವುದೇಕೆ?

Update: 2018-05-11 20:21 IST

ಪಟ್ನಾ, ಮೇ.11: ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಚಾರ ಅಭಿಯಾನದಲ್ಲಿ ಆಕ್ರಮಣಕಾರಿ ಭಾಷಣ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ, ಪ್ರಧಾನಿಯಾದ ಮಾತ್ರಕ್ಕೆ ಯಾರೂ ಅತಿಜಾಣರಾಗುವುದಿಲ್ಲ ಎಂದು ಕುಟುಕಿದ್ದಾರೆ. ಈ ಬಗ್ಗೆ ಟ್ವಿಟರ್‌ನಲ್ಲಿ ಬರೆದುಕೊಂಡಿರುವ ಸಿನ್ಹಾ, ಇಂದು ಚುನಾವಣಾ ಅಭಿಯಾನಗಳಿಗೆ ತೆರೆಬೀಳಲಿದೆ. ಧನಶಕ್ತಿಯ ಹೊರತಾಗಿಯೂ ಕೊನೆಯಲ್ಲಿ ಜನಶಕ್ತಿ ಗೆಲ್ಲಲಿದೆ ಎಂದು ತಿಳಿಸಿದ್ದಾರೆ.

“ಬಿಹಾರ, ಉತ್ತರ ಪ್ರದೇಶ, ಗುಜರಾತ್ ಹೀಗೆ ಎಲ್ಲ ರಾಜ್ಯಗಳಲ್ಲಿ ನಡೆದ ಚುನಾವಣೆಯ ಸಂದರ್ಭದಲ್ಲಿ ನನ್ನನ್ನು ತಾರಾ ಪ್ರಚಾರಕನಾಗಿ ಆಹ್ವಾನಿಸಿರಲಿಲ್ಲ. ಕರ್ನಾಟಕದಲ್ಲೂ ಪ್ರಚಾರ ಕಾರ್ಯಕ್ಕೆ ನನಗೆ ಆಹ್ವಾನ ನೀಡಿರಲಿಲ್ಲ. ಅದಕ್ಕೆ ಕಾರಣ ಏನೆಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ಪಕ್ಷದ ಒಬ್ಬ ಹಳೆಗೆಳೆಯನಾಗಿ, ಹಿತಚಿಂತಕನಾಗಿ ಮತ್ತು ಬೆಂಬಲಿಗನಾಗಿ ನಾನು ನೀಡುವ ಸಲಹೆಯೆಂದರೆ ಮಿತಿಯನ್ನು ದಾಟುವುದು ಬೇಡ. ವೈಯಕ್ತಿಕಗೊಳಿಸುವುದೂ ಬೇಡ. ವಿಷಯಗಳನ್ನು ಸಭ್ಯತೆ ಮೀರದೆ ಅತ್ಯಂತ ಸುಂದರವಾಗಿ ವ್ಯಕ್ತಪಡಿಸಬೇಕು. ಪ್ರಧಾನ ಮಂತ್ರಿಯ ಮರ್ಯಾದೆ ಮತ್ತು ಘನತೆಯನ್ನು ಕಾಯಬೇಕು” ಎಂದು ಪ್ರಧಾನ ಮಂತ್ರಿ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾರನ್ನೂ ಟ್ಯಾಗ್ ಮಾಡಿರುವ ಟ್ವೀಟ್‌ನಲ್ಲಿ ಸಿನ್ಹಾ ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷವನ್ನು ಪಿಪಿಪಿ (ಪಾಂಡಿಚೆರಿ, ಪಂಜಾಬ್ ಮತ್ತು ಪರಿವಾರ) ಎಂದು ಸಂಬೋಧಿಸಿರುವ ಪ್ರಧಾನಿ ಮಾತನ್ನು ಕಟುವಾಗಿ ಟೀಕಿಸಿರುವ ಸಿನ್ಹಾ, ಇಂಥ ಅಸಂಬದ್ಧ ಮತ್ತು ಹಾಸ್ಯಾಸ್ಪದ ವ್ಯಾಖ್ಯಾನಗಳನ್ನು ನೀಡುವುದರ ಅಗತ್ಯವೇನಿದೆ ಎಂದು ಪ್ರಶ್ನಿಸಿದ್ದಾರೆ. ಕರ್ನಾಟಕ ಚುನಾವಣೆಯ ಫಲಿತಾಂಶ ಮೇ 15ಕ್ಕೆ ಹೊರಬೀಳಲಿದೆ. ಏನು ಬೇಕಾದರೂ ನಡೆಯಬಹುದು. ಪ್ರಧಾನಿ ಎಂದ ಮಾತ್ರಕ್ಕೆ ದೇಶದ ಅತ್ಯಂತ ಜಾಣ ವ್ಯಕ್ತಿಯಾಗುವುದಿಲ್ಲ. ಪ್ರಧಾನಿಯಾಗಲು ಅರ್ಹತೆಯ ಅಗತ್ಯವಿಲ್ಲ. ಬಹುಮತವಿದ್ದರೆ ಸಾಕು. ಆದರೆ ಶಂಕರಾಚಾರ್ಯರಾಗಲು ಹೆಚ್ಚು ಜಾಣ್ಮೆ, ಅನುಭವ ಮತ್ತು ನಾಯಕತ್ವ ಗುಣಗಳ ಅಗತ್ಯವಿದೆ ಎಂದು ಸಿನ್ಹಾ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News